‘ತಾಲ್ಲೂಕು ಕಚೇರಿ ಮುಂದೆ ಸತ್ಯಾಗ್ರಹ ಕುಳಿತಿದ್ದೆವು. ನಾನು ಇನ್ನಿತರೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹರತಾಳ ಮಾಡುತ್ತಿದ್ದಾಗ ಅಲ್ಲಿಗೆ ಡಿಸಿ ಜಾರ್ಜ್ ಮ್ಯಾಥ್ಯೂನ್ ಹಾಗೂ ಎಸ್‌ಪಿ ಜೈಸಿಂಗ್ ಬಂದು ನಮ್ನನ್ನು ಸತ್ಯಾಗ್ರಹ ಬಿಡುವಂತೆ ಹೇಳಿದರು. ನಾವು ಒಪ್ಪದೆ ಸತ್ಯಾಗ್ರಹ ಮುಂದುವರೆಸಿದಾಗ ಬ್ರಿಟೀಷ್ ಪೊಲೀಸರ ಬಂದೂಕಿನಿಂದ ಹಾರಿದ ಗುಂಡಿಗೆ ಭಕ್ತರಹಳ್ಳಿಯ ಕುಂಬಾರದೊಡ್ಡಿ ನಾರಾಯಣಪ್ಪ ಬಲಿಯಾಗಿದ್ದು ಇನ್ನೂ ನನ್ನ ಕಣ್ಣೆದುರಿಗೆ ಕಟ್ಟಿದಂತಿದೆ’ ಎಂದು ಸ್ವಾತಂತ್ರ್ಯ ಹೋರಾಟದ ದಿನಗಳನ್ನುನೆನೆಸಿಕೊಂಡು ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನೂ ಕಂಡ ಬಚ್ಚಹಳ್ಳಿಯ ಚಂಗಲ್‌ರಾವ್ ತನ್ನ ಕಳೆದ ಹೋರಾಟದ ದಿನಗಳ ಬಗ್ಗೆ ವಿವರಿಸುತ್ತಿದ್ದರು.
ನನಗೆ ಜನವಾಣಿ ಪತ್ರಿಕೆಯು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ನೀಡಿತಲ್ಲದೆ ಆಗಿನ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಪುರದ ಜಿ.ನಾರಾಯಣಗೌಡರ ಸಂಪರ್ಕ ಕೂಡ ನೇರವಾಗಿ ಹೋರಾಟಕ್ಕೆ ದುಮುಕಲು ಕಾರಣವಾಯಿತು. ೧೯೪೧ನೇ ವರ್ಷ ಇರಬೇಕು. ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ನಾನು ಸೇರಿದಂತೆ ಮಳ್ಳೂರಿನ ಪಾಪಣ್ಣ, ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ, ಕುಂಬಾರದೊಡ್ಡಿ ನಾರಾಯಣಪ್ಪ, ಜಿ.ನಾರಾಯಣಗೌಡರು, ವೀರಪ್ಪ, ಕೆ.ಎಂ.ನಂಜುಂಡಪ್ಪ, ಕಂಬದಹಳ್ಳಿಯ ಮುನಿಸ್ವಾಮಪ್ಪ, ಮಳಮಾಚನಹಳ್ಳಿಯ ದ್ಯಾವಪ್ಪ ಇನ್ನಿತರರು ನೇತೃತ್ವದಲ್ಲಿ ಕೊತ್ತನೂರು, ತಿಪ್ಪೇನಹಳ್ಳಿ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಬೋದಗೂರು ಹಾಗೂ ಪಟ್ಟಣದ ನೂರಾರು ನಾಗರೀಕರು ಪಾಲ್ಗೊಂಡಿದ್ದೆವು. ಒಂದು ದಿನ ಕಂಬದಹಳ್ಳಿಯ ಮುನಿಸ್ವಾಮಿ ತನ್ನ ಸೈಕಲ್ ಮಾರಿ ಬುರುಗು ಖರೀದಿಸಿ ಅದನ್ನು ಪಟ್ಟಣದ ಎಲ್ಲಾ ಶಾಲೆಗಳ ಮಕ್ಕಳಿಗೂ ಹಂಚಿ ೧ ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಆ ಸತ್ಯಾಗ್ರಹಕ್ಕೆ ಕರೆದುಕೊಂಡು ಬಂದಿದ್ದ. ಸತ್ಯಾಗ್ರಹ ಜೋರಾಗಿತ್ತು.
ಅಲ್ಲಿಗೆ ಬಂದ ಎಸ್‌ಪಿ ಹಾಗೂ ಡಿಸಿ ಸತ್ಯಾಗ್ರಹವನ್ನು ಕೈ ಬಿಡುವಂತೆ ಹೇಳಿದರು. ನಾವು ಜಗ್ಗಲಿಲ್ಲ. ಆಗ ಎಸ್‌ಪಿ ಬಂದೂಕು ತೆಗೆದು ಗುಂಡು ಹಾರಿಸ್ತೇನೆ ಅಂತ ಬೆದರಿಸಿದರು. ಆಗ ಕಂಬದಹಳ್ಳಿಯ ಮುನಿಸ್ವಾಮಪ್ಪ ತನ್ನ ಅಂಗಿಯನ್ನು ಹರಿದು ಹಾಕಿ ನಿನ್ನ ಬಂದೂಕಿನಲ್ಲಿ ಗುಂಡು ಇದ್ದರೆ, ನಿನಗೆ ದೈರ್ಯ ಇದ್ದರೆ ನನಗೆ ಗುಂಡು ಹಾರಿಸು ಎಂದು ಎಸ್‌ಪಿಯವರಿಗೆ ಸವಾಲು ಹಾಕಿದರು. ಆಗ ಜತೆಯಲ್ಲಿದ್ದ ಎಸ್‌ಐ ನಾರಾಯಣ್ ಏಯ್ ಎಸ್ಪಿ ಸಾಹೇಬರಿಗೆ ನೀನು ರೋಫ್ ಹಾಕ್ತೀಯ ಅಂತ ಮುನಿಸ್ವಾಮಿಗೆ ಒಂದು ಬಾರಿಸಿದರು. ಆಗ ಮುನಿಸ್ವಾಮಿಯೂ ಎಸ್‌ಐ ನಾರಾಯಣ್‌ರಿಗೆ ಬಲವಾಗಿ ಗುದ್ದಿದರು. ಆಗ ನಾರಾಯಣ್‌ರ ಪೊಲೀಸ್ ಟೋಪಿ ಕೆಳಗೆ ಬೀಳುತ್ತಿದ್ದಂತೆ ಲಾಠಿ ಚಾರ್ಜ್ ಮಾಡಲಾಯಿತು. ಲಾಠಿ ಏಟಿನಿಂದ ಕಂಬದಹಳ್ಳಿಯ ಮುನಿಸ್ವಾಮಿಯ ತಲೆಗೆ ಬಲವಾದ ಏಟುಬಿದ್ದರೂ ಬದುಕುಳಿದ. ಆದರೆ ಬಂದೂಕಿನ ಗುಂಡಿಗೆ ಕುಂಬಾರದೊಡ್ಡಿ ನಾರಾಯಣಪ್ಪ ತೀವ್ರವಾಗಿ ಗಾಯಗೊಂಡರು. ಚಿಕ್ಕಬಳ್ಳಾಪುರದ ಸಿಎಸ್‌ಐ ಆಸ್ಪತ್ರೆಗೆ ಕರೆದೊಯ್ದರು ಕೂಡ ಬದುಕುಳಿಯಲಿಲ್ಲ.
ಇದರಿಂದ ರೊಚ್ಚಿಗೆದ್ದ ಜನ ಇಷ್ಟೆಲ್ಲಾ ರಾದ್ದಾಂತಕ್ಕೂ ಕಾರಣವಾದ ಎಸ್‌ಐ ನಾರಾಯಣ್‌ರ ಮನೆ ಮೇಲೆ(ಪಟ್ಟಣದ ಅಶೋಕ ರಸ್ತೆಯ ಕೊಂಡಪ್ಪನವರ ಮನೆ ಸಮೀಪದಲ್ಲಿ ಮನೆಯಿತ್ತು) ದಾಳಿ ನಡೆಸಿ ಲೂಠಿ ಮಾಡಿದರು. ಮೊದಲೆ ದಾಳಿಯ ಸುಳಿವು ಅರಿತಿದ್ದ ಎಸ್‌ಐ ನಾರಾಯಣ್‌ರ ಮನೆಯವರು ಮನೆಯಲ್ಲಿ ಎಲ್ಲವನ್ನೂ ಇದ್ದಹಾಗೆ ಬಿಟ್ಟು ಮನೆ ಬಿಟ್ಟು ಬಚ್ಚಿಟ್ಟುಕೊಂಡಿದ್ದರು. ಮನೆ ದರೋಡೆ ಹಾಗೂ ಕೊಲೆ ಯತ್ನದ ಮೇಲೆ ನನ್ನನ್ನು ಸೇರಿ ೩೦ಕ್ಕೂ ಹೆಚ್ಚು ಮಂದಿಯನ್ನು ಚಿಕ್ಕಬಳ್ಳಾಪುರದ ಜೈಲಿಗೆ ಅಟ್ಟಲಾಯಿತು. ೫೨ ದಿನ ಜೈಲುವಾಸ ಕಂಡು ಬೇಷರತ್ ಮೇಲೆ ಬಿಡುಗಡೆಯಾಗಿ ಬಂದೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಚಂಗಲರಾವ್‌ರವರು ಸ್ವಾತಂತ್ರ್ಯ ನಂತರ ಗಾಂಧೀಜಿವರ ಸ್ವಾವಲಂಬನೆಯ ಕರೆಗೆ ಒಗೊಟ್ಟು ಪಟ್ಟಣದಲ್ಲಿನ ತನ್ನ ಮನೆಯನ್ನು ತೊರೆದು ತಮ್ಮ ವಂಶಪಾರಂಪರ್‍ಯವಾಗಿ ಬಂದಿದ್ದ ಜೋಡಿ ಗ್ರಾಮ ಬಚ್ಚಹಳ್ಳಿಗೆ ಬಂದು ನೆಲೆಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಬದುಕುತ್ತಿದ್ದರು.