Home Women ಅತ್ತೆ ಸೊಸೆಯರು ತಯಾರಿಸುವ ರುಚಿಕರ ಒಬ್ಬಟ್ಟು

ಅತ್ತೆ ಸೊಸೆಯರು ತಯಾರಿಸುವ ರುಚಿಕರ ಒಬ್ಬಟ್ಟು

0

ನಗರದ ವಾಸವಿ ರಸ್ತೆಯ ಎರಡನೇ ಕ್ರಾಸ್ ನಲ್ಲಿರುವ ಅತ್ತೆ ಸೊಸೆಯರಾದ ಮನ್ಮಥಮ್ಮ ಮತ್ತು ರಾಧಾ ತಾವು ತಯಾರಿಸುವ ರುಚಿಕರ ಒಬ್ಬಟ್ಟಿನಿಂದಾಗಿ ತಾಲ್ಲೂಕು, ಜಿಲ್ಲೆಯಷ್ಟೇ ಅಲ್ಲದೆ ವಿದೇಶಗಳಲ್ಲೂ ಪರಿಚಿತರಾಗಿದ್ದಾರೆ.
ಈ ಅತ್ತೆ ಸೊಸೆಯರು ತಯಾರಿಸುವ ಒಬ್ಬಟ್ಟು ಅಥವ ಹೋಳಿಗೆ ಲಂಡನ್ ಮತ್ತು ಅಮೆರಿಕಾ ದೇಶಗಳಿಗೂ ಪ್ರಯಾಣ ಬೆಳೆಸಿವೆ. ದೇವನಹಳ್ಳಿ, ಬೆಂಗಳೂರು, ವಿಜಯಪುರ ಮುಂತಾದೆಡೆಗಳಿಂದ ಯಾರೇ ವಿದೇಶಕ್ಕೆ ತೆರಳಿದರೂ ಇವರಿಗೆ ತಿಳಿಸಿ ಒಬ್ಬಟ್ಟನ್ನು ಕಟ್ಟಿಸಿಕೊಂಡು ಹೋಗುವುದು ಮಾತ್ರ ಮರೆಯುವುದಿಲ್ಲ.
ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಅನೇಕರು ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಎಲ್ಲರೂ ಇಷ್ಟಪಡುವ ಒಬ್ಬಟ್ಟನ್ನು ಇವರಿಂದ ಮಾಡಿಸಿಕೊಳ್ಳುವುದು ರೂಢಿಯಾಗಿದೆ.
‘ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಮತ್ತು ನಮ್ಮ ಅತ್ತೆ ಹೋಳಿಗೆಯನ್ನು ಮಾಡುತ್ತಿದ್ದೇವೆ. ನಮ್ಮತ್ತೆ ಒಬ್ಬಟ್ಟನ್ನು ಬಹಳ ರುಚಿಯಾಗಿ ತಯಾರಿಸುತ್ತಿದ್ದುದನ್ನು ಕಂಡು ಕೆಲವರು ಕೇಳುತ್ತಿದ್ದರು. ಹಾಗೆಯೇ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುವ ಮೂಲಕ ನಾವು ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬಟ್ಟನ್ನು ತಯಾರಿಸಿಕೊಡಲು ಪ್ರಾರಂಭಿಸಿದೆವು. ದಿನಕ್ಕೆ ಹೆಚ್ಚೆಂದರೆ 200 ಹೋಳಿಗೆಯನ್ನು ಮಾಡುತ್ತೇವೆ. ಹಲವಾರು ಮುಸ್ಲೀಮರೂ ಹೋಳಿಗೆ ಕೇಳಿ ಮಾಡಿಸಿಕೊಳ್ಳುತ್ತಾರೆ. ವಿದೇಶಕ್ಕೆ ಹೋಗುವವರು ಕೇಳಿದಾಗ ವಿಶೇಷವಾಗಿ ಪ್ಯಾಕ್ ಮಾಡಿಕೊಡುತ್ತೇವೆ’ ಎನ್ನುತ್ತಾರೆ ರಾಧಮ್ಮ.
ರಾಧಮ್ಮ ಅವರ ದೂರವಾಣಿ ಸಂಖ್ಯೆ: 9035871987