Home Women ಮಹಿಳಾ ರೈತಕೂಟ

ಮಹಿಳಾ ರೈತಕೂಟ

0

ತಾಲ್ಲೂಕಿನ ಮಳ್ಳೂರು, ಮುತ್ತೂರು ಮತ್ತು ಕಾಚಹಳ್ಳಿ ವ್ಯಾಪ್ತಿಯ ಮಹಿಳಾ ರೈತರು ಸ್ಥಾಪಿಸಿರುವ ರೈತ ಒಕ್ಕೂಟ ಜಿಲ್ಲೆಯ ಏಕೈಕ ಮಹಿಳಾ ರೈತ ಒಕ್ಕೂಟವಾಗಿದ್ದು ಮಾದರಿಯಾಗಿ ರೂಪುಗೊಂಡಿದೆ.
ಹದಿನೈದು ಸದಸ್ಯೆಯರ ಸಂಖ್ಯೆಯ ಭಾರತಾಂಬೆ ಮಹಿಳಾ ರೈತ ಒಕ್ಕೂಟ ೨೦೦೯ರಲ್ಲಿ ಕೆನರಾಬ್ಯಾಂಕ್ ಮಹಾಪ್ರಬಂಧಕ ರವೀಂದ್ರಭಂಡಾರಿಯವರಿಂದ ಉದ್ಘಾಟನೆಗೊಂಡಿತ್ತು. ನಬಾರ್ಡ್ ನೆರವಿನಿಂದ ಅಧ್ಯಯನ ಪ್ರವಾಸ ಕೈಗೊಂಡಿದ್ದ ಮಹಿಳೆಯರು ಅಲ್ಲಿನ ಕಲಿಕೆಯಿಂದ ತಮ್ಮ ಕೃಷಿಯಲ್ಲಿ ಹಲವಾರು ಬದಲಾವಣೆಗಳನ್ನು ರೂಪಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ಉತ್ಕೃಷ್ಟ ರೇಷ್ಮೆ ಬೆಳೆ, ಜೇನು ಸಾಕಾಣಿಕೆ, ಗಿರಿರಾಜಕೋಳಿ ಸಾಕಾಣಿಕೆ, ಸೈಲೇಜ್ ಮುಖಾಂತರ ಮೇವು ಸಂಗ್ರಹಿಸಿ ಕುರಿ ಸಾಕಾಣಿಕೆ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಕಾಲಕಾಲಕ್ಕೆ ವಿಜ್ಞಾನಿಗಳನ್ನು ಕರೆಸಿ ರೈತ ಒಕ್ಕೂಟ ಮತ್ತು ಇತರೇ ರೈತರಿಗೂ ಮಾಹಿತಿ ದೊರಕಿಸಿಕೊಡುತ್ತಿದ್ದಾರೆ. ಕೃಷಿ ಮೇಳ, ಫಲಪುಷ್ಪಪ್ರದರ್ಶನ ಮೇಳಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ.
’ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಅವರು ಮಾರ್ಗದರ್ಶನ ಮಾಡಿ ಮಹಿಳಾ ರೈತಕೂಟವನ್ನು ಸ್ಥಾಪಿಸಿದರು. ನಾವು ಪ್ರತಿವಾರವೂ ತಲಾ ನೂರು ರೂಗಳನ್ನು ಸಂಗ್ರಹಿಸಿ ಹಣ ಉಳಿತಾಯ ಮಾಡುತ್ತಿದ್ದೇವೆ. ಪ್ರವಾಸದಿಂದ ಸಾಕಷ್ಟು ಜ್ಞಾನ ಪಡೆದು ನಮ್ಮಲ್ಲಿಯೂ ಅಳವಡಿಸಿಕೊಂಡು ಇತರರಿಗೂ ತಿಳಿಸಿಕೊಡುತ್ತಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳಿಂದ ಗ್ರಾಮದಲ್ಲಿ ಸಿಗುವ ನೆರವನ್ನೂ ಹಾಗೂ ನೈರ್ಮಲ್ಯೀಕರಣದ ಕೆಲಸಗಳನ್ನೂ ಮಾಡಿಸುತ್ತೇವೆ. ಕುಟುಂಬಗಳ ವ್ಯಾಜ್ಯ ಹಾಗೂ ಸಣ್ಣಪುಟ್ಟ ಜಗಳಗಳನ್ನೂ ನಾವುಗಳೇ ಇತ್ಯರ್ಥ ಮಾಡುತ್ತೇವೆ. ನಬಾರ್ಡ್ ಆರ್ಥಿಕ ನೆರವು ಮತ್ತು ಮೇಲೂರು ಶಾಖೆ ಕೆನರಾ ಬ್ಯಾಂಕ್ ಸಹಕಾರದಿಂದ ನಾವು ಆರ್ಥಿಕ ಪ್ರಗತಿ ಕಾಣುತ್ತಿದ್ದೇವೆ’ ಎಂದು ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ತಿಳಿಸಿದರು.
’ಹೆಣ್ಣು ಮಕ್ಕಳ ಶಿಕ್ಷಣ, ಆರ್ಥಿಕ ಸ್ವಾವಲಂಬನೆಗೆ ಸಹಾಯಕವಾಗುವ ಯೋಜನೆಗಳನ್ನು ರೂಪಿಸಿ ನಮ್ಮ ಭಾಗದ ಗ್ರಾಮೀಣ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ರೈತಕೂಟದ್ದು’ ಎಂದು ಅವರು ಹೇಳಿದರು.
ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಕಾರ್ಯದರ್ಶಿ ವನಿತಾ, ಸಹಕಾರ್ಯದರ್ಶಿ ಮುತ್ತೂರು ನಳಿನಾ, ಸದಸ್ಯೆಯರಾದ ಸರೋಜಮ್ಮ, ಸಂಪಂಗಿಯಮ್ಮ, ಲಲಿತಮ್ಮ, ಶಾಂತಮ್ಮ, ಸುಜಾತಾ, ಅಶ್ವತ್ಥಮ್ಮ, ಸುಮಾ, ರೇಖಾ, ಶ್ವೇತಾ.