Home Articles ಗಾಂಧೀಜಿ ಭೇಟಿ; ಪ್ರೌಢಶಾಲೆ ಸ್ಥಾಪನೆಗೆ ನಾಂದಿ

ಗಾಂಧೀಜಿ ಭೇಟಿ; ಪ್ರೌಢಶಾಲೆ ಸ್ಥಾಪನೆಗೆ ನಾಂದಿ

0

ಮಹಾತ್ಮರ ಭೇಟಿಯಿಂದ ಪ್ರಭಾವಿತರಾಗಿ ಶಾಲೆಗೆ ಭೂಮಿ, ಕಟ್ಟಡ ದೇಣಿಗೆ ನೀಡಿದ ಬಿ.ವಿರೂಪಾಕ್ಷಪ್ಪ

Sidlaghatta : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭೇಟಿ ಕೇವಲ ಸ್ವಾತಂತ್ರ್ಯ ಹೋರಾಟದ ನೆನಪಾಗಿ ಉಳಿಯಲಿಲ್ಲ. ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಶಿಡ್ಲಘಟ್ಟದ ಬಿ.ವಿರೂಪಾಕ್ಷಪ್ಪ ಅವರು ಪಟ್ಟಣದಲ್ಲಿ ಪ್ರೌಢಶಾಲೆ ಸ್ಥಾಪನೆಗೆ ಮುಂದಾಗುವ ಮೂಲಕ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದರು. ಗಾಂಧೀಜಿ ಭೇಟಿ ನೀಡಿದ ಸಂದರ್ಭದಲ್ಲಿ ಆರಂಭವಾದ ಈ ಪ್ರೇರಣೆ, ಮುಂದೆ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿಯಾಯಿತು.

1936ರ ಮೇ 31ರಂದು ಗಾಂಧೀಜಿ ಮತ್ತು ಕಸ್ತೂರಬಾ ಗಾಂಧಿ ಅವರು ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು. ಕೋಲಾರ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ನಡೆದ ಈ ಭೇಟಿಯ ವಿವರಗಳು 1936ರ ಜೂನ್ 1ರ ದಿ ಹಿಂದೂ ಪತ್ರಿಕೆಯಲ್ಲಿಯೂ ಪ್ರಕಟವಾಗಿದ್ದವು. ಗಾಂಧೀಜಿ ಅವರ ಭೇಟಿಯ ಸಂದರ್ಭದ ಅಪರೂಪದ ದಾಖಲೆಗಳು ಇಂದಿಗೂ ಲಭ್ಯವಿದ್ದು, ಅಂದಿನ ಘಟನೆಗಳಿಗೆ ಸಾಕ್ಷಿಯಾಗಿವೆ.

The Hindu 1 June 1936 report Gandhiji Tour in Kolar with section At Sidhlagatta
ಶಿಡ್ಲಘಟ್ಟಕ್ಕೆ ಗಾಂಧೀಜಿ ಭೇಟಿ ನೀಡಿರುವ ವರದಿಯಿರುವ ಜೂನ್ 1, 1936 ರ “ದಿ ಹಿಂದೂ” ಪತ್ರಿಕೆ

ಗಾಂಧೀಜಿ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ವೇಮಗಲ್ ಸೋಮಶೇಖರ್ ಅವರ ಬಳಿ, ಗಾಂಧೀಜಿ ಅವರನ್ನು ಭೇಟಿಯಾಗಿದ್ದ ದಿವಂಗತ ಎಂ.ಎಸ್.ಪುಟ್ಟಣ್ಣ ಅವರು ಅಂದಿನ ಘಟನೆಯನ್ನು ವಿವರಿಸಿ ಬರೆದ ಪತ್ರವಿದೆ. ಈ ಪತ್ರದಲ್ಲಿ ಶಿಡ್ಲಘಟ್ಟಕ್ಕೆ ಗಾಂಧೀಜಿ ಭೇಟಿ ನೀಡಿದ ಸಂದರ್ಭದ ವಿವರಗಳಿವೆ.

ಜಿಲ್ಲೆಯಲ್ಲಿ ಗಾಂಧೀಜಿ ಅವರು ಪ್ರವಾಸ ಮಾಡಿರುವ ವಿವರವಿರುವ 1936 ರ ಪತ್ರಿಕೆಯನ್ನು ವೇಮಗಲ್ ಸೋಮಶೇಖರ್ ಪ್ರದರ್ಶಿಸಿದರು

ಹರಿಜನ ನಿಧಿ ಸಂಗ್ರಹಕ್ಕೆ ಭೇಟಿ

1936ರ ಮೇ ತಿಂಗಳಲ್ಲಿ ಗಾಂಧೀಜಿ ಅವರು 20 ದಿನಗಳ ಕಾಲ ನಂದಿಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು. ಮೇ 31ರಂದು ಅಲ್ಲಿಂದ ಮೆಟ್ಟಿಲು ಮಾರ್ಗವಾಗಿ ಬೆಟ್ಟ ಇಳಿದು, ಕೆ. ಚಂಗಲರಾಯರೆಡ್ಡಿ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಕೋಲಾರಕ್ಕೆ ಪ್ರವಾಸ ಕೈಗೊಂಡಿದ್ದರು. ಹರಿಜನ ನಿಧಿ ಸಂಗ್ರಹ ಹಾಗೂ ದಲಿತರ ಅಭಿವೃದ್ಧಿ ಈ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು.

ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ತೆರಳುವ ಮಾರ್ಗದಲ್ಲಿ ಶಿಡ್ಲಘಟ್ಟಕ್ಕೆ ಆಗಮಿಸಿದ ಗಾಂಧೀಜಿ ಅವರನ್ನು ಅಂದಿನ ಪುರಸಭೆ ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ಅದ್ಧೂರಿಯಾಗಿ ಸ್ವಾಗತಿಸಿದ್ದರು. ನಗರದ ಮುಖ್ಯ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ಹಸಿರು ತೋರಣಗಳಿಂದ ಅಲಂಕರಿಸಿದ ವಿಶಾಲ ಚಪ್ಪರ ನಿರ್ಮಿಸಿ, ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

ಮಧ್ಯಾಹ್ನದ ವೇಳೆಗೆ ಗಾಂಧೀಜಿ ಅವರಿದ್ದ ಕಾರು ವಿರೂಪಾಕ್ಷಪ್ಪ ಅವರ ಮನೆ ಮುಂದೆ ಬಂದು ನಿಂತಿತು. ಹರಿಜನ ಸೇವಕ ಸಂಘದ ಅಧ್ಯಕ್ಷ ಕೆ.ಚಂಗಲರಾಯರೆಡ್ಡಿ ಅವರು ವಿರೂಪಾಕ್ಷಪ್ಪ ಹಾಗೂ ಅಮಲ್ದಾರ್ ಸೂರ್ಯನಾರಾಯಣ ರಾವ್ ಅವರನ್ನು ಗಾಂಧೀಜಿ ಅವರಿಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಅವರು ತಾವು ಓದಿಸುತ್ತಿದ್ದ ಬಾಲಕ ಎಂ.ಎಸ್.ಪುಟ್ಟಣ್ಣ ಅವರ ಕೈಯಲ್ಲಿ ಒಂದು ಸವರನ್ ತೂಕದ ನೂರು ಬೆಳ್ಳಿ ರೂಪಾಯಿಗಳ ಗಂಟನ್ನು ಗಾಂಧೀಜಿ ಅವರಿಗೆ ದೇಣಿಗೆಯಾಗಿ ಕೊಡಿಸಿದರು. ಬಾಲಕನ ನಮಸ್ಕಾರಕ್ಕೆ ಪ್ರತಿಯಾಗಿ ಗಾಂಧೀಜಿ ಅವರು, ‘ಜೀತೇ ರಹೋ ಬೇಟಾ’ ಎಂದು ಆಶೀರ್ವದಿಸಿದ್ದರು.

ಪುರಸಭೆ ವತಿಯಿಂದ ಗಾಂಧೀಜಿ ಅವರಿಗೆ ಮಾನಪತ್ರವನ್ನೂ ಅರ್ಪಿಸಲಾಗಿತ್ತು. ಮೈಸೂರು ಮಹಾರಾಜರ ಜನ್ಮದಿನದ ಸಂದರ್ಭದಲ್ಲಿಯೇ ಗಾಂಧೀಜಿ ಪಟ್ಟಣಕ್ಕೆ ಭೇಟಿ ನೀಡಿದ್ದರಿಂದ ಜನರು ಸಂತಸಗೊಂಡಿದ್ದರು. ಮಾನಪತ್ರದಲ್ಲಿ ಮಹಾರಾಜರ ಆಡಳಿತದಲ್ಲಿ ಗ್ರಾಮಾಭಿವೃದ್ಧಿ, ಗುಡಿ ಕೈಗಾರಿಕೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಉಲ್ಲೇಖಿಸಲಾಗಿತ್ತು. ಗಾಂಧೀಜಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಭಾರತ ಮಾತೆಗೆ ಜಯಘೋಷ ಮೊಳಗಿಸುತ್ತಾ ಚಿಂತಾಮಣಿಯತ್ತ ಪ್ರಯಾಣ ಬೆಳೆಸಿದ್ದರು.

ಶಾಲೆ ಸ್ಥಾಪನೆಗೆ ಪ್ರೇರಣೆ

ಬಿ.ವಿರೂಪಾಕ್ಷಪ್ಪ

ಗಾಂಧೀಜಿ ಅವರ ಭೇಟಿಯಿಂದ ಪ್ರಭಾವಿತರಾಗಿದ್ದ ವಿರೂಪಾಕ್ಷಪ್ಪ ಅವರು ಪಟ್ಟಣದಲ್ಲಿ ಪ್ರೌಢಶಾಲೆ ಸ್ಥಾಪಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಆಗ ಶಿಡ್ಲಘಟ್ಟದಲ್ಲಿ ಪ್ರೌಢಶಾಲೆ ಇರಲಿಲ್ಲ. ಪ್ರೌಢಶಾಲೆ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇತ್ತು.

ಶಾಲೆಗೆ ತೆರಳಲು ರೈಲು ಹತ್ತುವ ಧಾವಂತದಲ್ಲಿ ವಿದ್ಯಾರ್ಥಿಯೊಬ್ಬ ರೈಲಿನಡಿ ಸಿಲುಕಿ ಮೃತಪಟ್ಟಿದ್ದ ಘಟನೆ ವಿರೂಪಾಕ್ಷಪ್ಪ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತ್ತು. ನಮ್ಮೂರಿನಲ್ಲಿಯೇ ಪ್ರೌಢಶಾಲೆ ಇದ್ದಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂಬ ಚಿಂತನೆ ಅವರಲ್ಲಿ ಮೂಡಿತ್ತು. ಇದಕ್ಕೆ ಗಾಂಧೀಜಿ ಅವರ ಭೇಟಿಯಿಂದ ದೊರೆತ ಪ್ರೇರಣೆಯೂ ಸೇರಿ, ಶಾಲೆ ಸ್ಥಾಪನೆಗೆ ಮುಂದಾದರು.

ಪ್ರೌಢಶಾಲೆ ಆರಂಭಿಸಲು ನಾಲ್ಕು ವರ್ಷಗಳ ಕಾಲ ತಮ್ಮ ಮನೆಯನ್ನೇ ಬಿಟ್ಟುಕೊಟ್ಟರು. ಬಳಿಕ 13 ಎಕರೆ ಒಂದು ಗುಂಟೆ ಜಮೀನು ಖರೀದಿಸಿ, ಶಾಲಾ ಕಟ್ಟಡ ನಿರ್ಮಾಣಕ್ಕೆ ₹30 ಸಾವಿರ ನೀಡಿದರು. ನಂತರ ಜಮೀನು ಮತ್ತು ಹಣವನ್ನು ಸರ್ಕಾರಕ್ಕೆ ದಾನ ಮಾಡಿದರು. ಈ ಕೊಡುಗೆಯಿಂದ ಶಿಡ್ಲಘಟ್ಟದಲ್ಲಿ ಪ್ರೌಢಶಾಲೆ ಸ್ಥಾಪನೆಗೆ ಅಗತ್ಯವಾದ ನೆಲೆ ಸಿದ್ಧವಾಯಿತು.

ಶೈಕ್ಷಣಿಕ ಪ್ರಗತಿಗೆ ಕೊಡುಗೆ

ಶಿಡ್ಲಘಟ್ಟದಲ್ಲಿ ಪ್ರೌಢಶಾಲೆ ಆರಂಭವಾದ ಬಳಿಕ ತಾಲ್ಲೂಕಿನ ಅನೇಕ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಪ್ರೌಢಶಿಕ್ಷಣ ಪಡೆಯುವ ಅವಕಾಶ ದೊರೆಯಿತು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಇದು ನೆರವಾಯಿತು. ಗಾಂಧೀಜಿ ಅವರ ಭೇಟಿಯಿಂದ ಪ್ರೇರಣೆ ಪಡೆದ ವಿರೂಪಾಕ್ಷಪ್ಪ ಅವರ ದೂರದೃಷ್ಟಿ, ಮುಂದಿನ ತಲೆಮಾರುಗಳ ಶಿಕ್ಷಣಕ್ಕೆ ಪೂರಕವಾಯಿತು ಎಂದು ವೇಮಗಲ್ ಸೋಮಶೇಖರ್ ವಿವರಿಸಿದರು.

ಗಾಂಧೀವಾದಿ ವೇಮಗಲ್ ಸೋಮಶೇಖರ್

ಬಿ.ವಿರೂಪಾಕ್ಷಪ್ಪ ಅವರ ಜೀವನದ ಕುರಿತು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಶಿಕ್ಷಣ ತಪಸ್ವಿ ಬಿ.ವಿರೂಪಾಕ್ಷಪ್ಪ ಲೇಖನವನ್ನು, ವೇಮಗಲ್ ಸೋಮಶೇಖರ್ ಅವರ ಗಾಂಧಿ ಚಿಂತನೆ ಕುರಿತು ಗಾಂಧೀಜಿಯವರ ಬದುಕು ನಮಗೆ ಪ್ರೇರಣೆಯಾಗಲಿ – ಗಾಂಧೀವಾದಿ ವೇಮಗಲ್ ಸೋಮಶೇಖರ್ ವರದಿಯನ್ನು ಹಾಗೂ ತಾಲ್ಲೂಕಿನ ಇತಿಹಾಸದ ಮತ್ತೊಂದು ಅಧ್ಯಾಯವಾದ ಸೈರನ್ ಮೊಳಗಿಸಿದ ಸ್ವಾವಲಂಬನೆ: ವಿಶ್ವೇಶ್ವರಯ್ಯ ಕನಸಿನ ಕಿಸಾನ್ ಸಿಲ್ಕ್ ಕಾರ್ಖಾನೆಯಲ್ಲಿ ಅರಳಿದ ಮಹಿಳಾ ಶ್ರಮ ಲೇಖನವನ್ನೂ ಓದಿ.

In English: Mahatma Gandhi and Kasturba Gandhi visited Sidlaghatta on 31 May 1936, and the visit inspired B. Virupakshappa, then vice-president of the town municipality, to establish the town’s first high school. After resting for 20 days at Nandi Hills, Gandhi toured Chikkaballapur, Sidlaghatta, Chintamani and Kolar under the leadership of Harijan Sevak Sangha president K. Changalaraya Reddy to collect funds for the Harijan cause; The Hindu reported the tour on 1 June 1936. Virupakshappa welcomed Gandhi at his house on the main road, and had M.S. Puttanna, a boy whose education he was supporting, hand Gandhi a bundle of 100 silver rupees; Gandhi blessed the boy with ‘Jeete raho beta’. The municipality presented Gandhi an address of welcome, and the visit coincided with the Maharaja of Mysore’s birthday. At the time Sidlaghatta had no high school and students travelled to Chikkaballapur; moved by the death of a student who fell under a train, and inspired by Gandhi’s visit, Virupakshappa gave his own house for the school for four years, then bought 13 acres 1 gunta of land, gave Rs 30,000 for the building and donated both to the government. Gandhian writer Vemagal Somashekar, who holds a copy of the 1936 newspaper and a letter by the late M.S. Puttanna describing the visit, said Virupakshappa’s vision helped generations of students, especially girls, get secondary education locally.

FAQ

ಗಾಂಧೀಜಿ ಶಿಡ್ಲಘಟ್ಟಕ್ಕೆ ಯಾವಾಗ ಭೇಟಿ ನೀಡಿದ್ದರು?
1936ರ ಮೇ 31ರಂದು, ನಂದಿಬೆಟ್ಟದಿಂದ ಕೈಗೊಂಡ ಕೋಲಾರ ಜಿಲ್ಲೆಯ ಪ್ರವಾಸದ ವೇಳೆ ಹರಿಜನ ನಿಧಿ ಸಂಗ್ರಹಕ್ಕಾಗಿ ಗಾಂಧೀಜಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು.

ಶಿಡ್ಲಘಟ್ಟದ ಮೊದಲ ಪ್ರೌಢಶಾಲೆಗೆ ಭೂಮಿ ದಾನ ಮಾಡಿದವರು ಯಾರು?
ಅಂದಿನ ಪುರಸಭೆ ಉಪಾಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು 13 ಎಕರೆ 1 ಗುಂಟೆ ಜಮೀನು ಹಾಗೂ ಶಾಲಾ ಕಟ್ಟಡಕ್ಕೆ ₹30 ಸಾವಿರವನ್ನು ಸರ್ಕಾರಕ್ಕೆ ದಾನ ಮಾಡಿದರು.

For Daily Updates WhatsApp ‘HI’ to 7406303366

error: Content is protected !!
Exit mobile version