ಶ್ರೀಹರಿಕೋಟಾದ ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಡೀ ವಿಶ್ವದ ದೃಷ್ಟಿ ಭಾರತದೆಡೆಗೆ ನೆಟ್ಟಿದೆ. ಭಾರತದ ಮೊಟ್ಟಮೊದಲ ಅಂತರ್‍ಗ್ರಹ ಬಾನನೌಕೆ ಅಂದು ಉಡಾವಣೆಗೊಳ್ಳಲಿದೆ. ಅದಕ್ಕೆಂದೇ ನಿರ್ಮಾಣಗೊಂಡ ಲಕಲಕನೆ ಹೊಳೆಯುವ ಮಂಗಳಯಾನ ಹೆಸರಿನ ಬಾನನೌಕೆ ವಾರದ ಮೊದಲೇ ರಾಕೆಟ್ಟಿನ ಬೆನ್ನೇರಿ ಕೂತಿದೆ. ಕ್ಷಣಗಣನೆ ಆರಂಭವಾಯಿತು. ಅಂತಿಮ ಹಂತದ ಸಿದ್ಧತೆಗಳೆಲ್ಲವೂ ಮುಗಿದು, ತಂಡದ ಮುಖಂಡರಿಂದ ಸೂಚನೆ ಬಂದೊಡನೆಯೇ ರಾಕೆಟ್ಟಿನ ಎಂಜಿನ್ ಉರಿಯಲಾರಂಭಿಸಿತು, ಹೊಗೆಯುಗುಳುತ್ತ ಮಂಗಳಯಾನ ನೌಕೆ ಆಗಸಕ್ಕೆ ಚಿಮ್ಮಿತು, ಅದರೊಂದಿಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೇರ್ಪಡೆಯಾಯಿತು.
ನಮ್ಮ ಸೌರಮಂಡಲದಲ್ಲಿ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ತೂನ್ ಇವೆಲ್ಲ ಸೂರ್ಯನನ್ನು ವಿವಿಧ ಅಂತರದಲ್ಲಿ, ವಿವಿಧ ರೂಪದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವ ಗ್ರಹಗಳು. ಇವುಗಳಲ್ಲಿ ಸೂರ್ಯನಿಂದ ತುಂಬ ಹತ್ತಿರವೂ ಅಲ್ಲ, ತುಂಬ ದೂರವೂ ಅಲ್ಲದೆ ಜೀವಜಾಲ ರೂಪುಗೊಳ್ಳಲು ಅನುಕೂಲ ವಾತಾವರಣವನ್ನು ಪಡೆದ ಏಕೈಕ ಗ್ರಹ ನಮ್ಮ ಭೂಮಿ. ಇದರ ಹೊರತಾಗಿ ನಮ್ಮ ಆಚಿನ ಕೆಂಪು ಬಣ್ಣವಾಗಿ ಕೋರೈಸುವ ಮಂಗಳಗ್ರಹದ ಬಗ್ಗೆ ನಮಗೆ ಇನ್ನಿಲ್ಲದ ಕುತೂಹಲ, ಸೌರವ್ಯೂಹದ ನಾಲ್ಕನೆಯ ಗ್ರಹವಾದ ಮಂಗಳ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ನಮ್ಮಿಂದ ಕನಿಷ್ಟ 546 ಲಕ್ಷ ಕಿ.ಮೀ. ಹಾಗೂ ಗರಿಷ್ಟ 40 ಕೋಟಿ ಕಿಮೀ ದೂರದಲ್ಲಿ ಹಾರಾಡುತ್ತಿರುತ್ತದೆ.
ಮುಂದೊಮ್ಮೆ ಮಾನವ ಮಂಗಳಗ್ರಹಕ್ಕೆ ಹೋಗಿ ವಾಸಿಸಲು ಸಾಧ್ಯವಿರಬಹುದೆ? ಅಲ್ಲಿ ಜೀವಿಗೆ ಅನುಕೂಲಕರವಾದ ಸಂಪನ್ಮೂಲಗಳೇನಿರಬಹುದು? ಮಾನವ ಅದನ್ನು ವಾಸಯೋಗ್ಯ ಗ್ರಹವಾಗಿಸಬಹುದೆ? ಈ ಕುತೂಹಲದಿಂದಾಗಿಯೇ ಇಂದು ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳು ಅಪಾರ ಹಣ ಹಾಕಿ ಮಂಗಳನ ಬಗ್ಗೆ ಸಂಶೋಧನೆ ನಡೆಸುತ್ತಿವೆ.
ಇನ್ನು ಉಪಗ್ರಹಗಳು ಹೊತ್ತೊಯ್ಯುವ ವೈಜ್ಞಾನಿಕ ಉಪಕರಣಗಳು, ಅವುಗಳ ನಿರ್ಮಾಣ, ಅವುಗಳನ್ನು ಉಪಗ್ರಹದೊಳಕ್ಕೆ ಜೋಡಿಸಿಡುವ ವೈಖರಿ ಇವೂ ಕೂಡ ಬಹು ಸವಾಲಿನ ಕಾರ್ಯಗಳೇ. ಹಾಗೆಯೇ ಬಹು ಹಣ ಬೇಡುವ ಯೋಜನೆಗಳೇ.
ಬಾಹ್ಯ ಅವಕಾಶದಲ್ಲಿರುವ ನೌಕೆ ಸತತವಾಗಿ ಹಾರಾಡುತ್ತಿರುತ್ತದೆ, ಹಾಗಾಗಿ ಅದರೊಂದಿಗೆ ಭೂಮಿಯಿಂದ ಅವಿರತ ಸಂಪರ್ಕದಲ್ಲಿರುವುದೊಂದು ಇಂದಿನ ತಂತ್ರಜ್ಞಾನದ ಅದ್ಭುತ ವೈಶಿಷ್ಟ್ಯವೇ ಎನ್ನಬಹುದು.
ಬೆಂಗಳೂರಿನ ಹೊರವಲಯದಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್ವರ್ಕ್, ಹಾರಿಬಿಟ್ಟ ಉಪಗ್ರಹಗಳ ಮೇಲೆ ಸದಾಕಾಲ ಕಣ್ಣಿಟ್ಟು, ಅವುಗಳಿಗೆ ಸಂದೇಶ ಕಳುಹಿಸುವ ಹಾಗೂ ಸಂದೇಶ ಪಡೆಯುವ ಕಾರ್ಯವನ್ನು ನಿರ್ವಹಿಸುತ್ತಿದೆ.
ಮಂಗಳಯಾನ ನೌಕೆಯ ಯಶಸ್ವಿ ಉಡಾವಣೆಯಿಂದಾಗಿ ಹತ್ತಾರು ವಿಷಯಗಳಲ್ಲಿ ಭಾರತ ದಾಖಲೆಗಳನ್ನು ಹುಟ್ಟುಹಾಕಿದೆ. ಕೆಲವುಗಳ ಉಲ್ಲೇಖ ಹೀಗಿದೆ:
1. ಮೊದಲನೆ ಪ್ರಯತ್ನದಲ್ಲಿ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿರುವ ಮೊದಲ ದೇಶ ಭಾರತ.
2. ಮಂಗಳನಲ್ಲಿಗೆ ಉಪಗ್ರಹ ಕಳುಹಿಸುವಲ್ಲಿ ಸಾಫಲ್ಯ ಕಂಡ ರಷ್ಯಾ, ಅಮೆರಿಕಾ, ಐರೋಪ್ಯ ಸಂಘಟನೆಗಳ ಸಾಲಿಗೆ ಭಾರತ ನಾಲ್ಕನೆಯ ದೇಶವಾಗಿ ಸೇರ್ಪಡೆ.
3. ಮಂಗಳಯಾನಕ್ಕೆ ತಗುಲಿದ ವೆಚ್ಚ ಬರೀ 450 ಕೋಟಿ ರೂಪಾಯಿ. ಆದ್ದರಿಂದ ಇದುವರೆಗೆ ನಡೆದ ಅಂತರಗ್ರಹ ಹಾರಾಟಗಳಲ್ಲಿ ಅತಿ ಕಡಿಮೆ ವೆಚ್ಚದ ಬಾನನೌಕೆ ಎಂಬ ಹೆಗ್ಗಳಿಕೆಯನ್ನೂ ಮಂಗಳಯಾನ ಪಡೆದಿದೆ. ಇದು ಬಾಹ್ಯಾಕಾಶ ಕುರಿತಾದ ಇಂಗ್ಲಿಷ್ ಸಿನೆಮಾ ‘ಗ್ರಾವಿಟಿ’ಯ ನಿರ್ಮಾಣಕ್ಕೆ ಆದ ವೆಚ್ಚಕ್ಕಿಂತ ಕಡಿಮೆ, ನೂರಿಪ್ಪತ್ತು ಕೋಟಿ ಭಾರತೀಯರಲ್ಲಿ ಒಬ್ಬೊಬ್ಬರದ್ದೂ ಬರೀ ನಾಲ್ಕು ರೂಪಾಯಿ ಹಾಕಿದಷ್ಟು ಮಾತ್ರವೇ ವೆಚ್ಚ ಎಂಬಿತ್ಯಾದಿಯಾಗಿ ಇದನ್ನು ಬಣ್ಣಿಸಲಾಗುತ್ತಿದೆ.
ಮುಂದುವರೆಯುವುದು..
ಸರೋಜ ಪ್ರಕಾಶ್