Home Health ನಿದ್ರೆ

ನಿದ್ರೆ

0

ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಆಧಾರ ಸ್ತಂಭಗಳು. ಇವುಗಳಲ್ಲಿ ನಿದ್ರೆ ಅತಿ ಮುಖ್ಯವಾಗಿ ಬೇಕಾದ ಅಂಶ. ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್, ಜಂಕ್ ಫುಡ್‍ಗಳ ಸೇವನೆ, ಅತಿಯಾದ ಕೆಲಸದ ಒತ್ತಡ, ಅನಿಯಮಿತ ಕಾಲದಲ್ಲಿ ಆಹಾರ ಸೇವನೆ, ಅನಿಯಮಿತವಾದ ದಿನನಿತ್ಯದ ಚಟುವಟಿಕೆಗಳಿಂದಾಗಿ ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವಂಥಹ ಸಮಸ್ಯೆ.
ನಿದ್ರೆಯ ಉತ್ಪತ್ತಿ:
ಯದಾ ತು ಮನಸಿ ಕ್ಲಾಂತೆ ಕರ್ಮಾತ್ಮಾನ: ಕ್ಲಮಾನ್ವಿತ||
ವಿಷಯೇಭ್ಯೋ ನಿವರ್ತಂತೆ ತದಾ ಸ್ವಪಿತಿ ಮಾನವ|| ಚರಕ ಸೂತ್ರ||
ಯಾವಾಗ ಕಾರ್ಯ ನಿರ್ವಹಿಸಿ ಮನಸ್ಸು ದಣಿಯುವುದೋ ಇಂದ್ರಿಯಗಳು (ಕಣ್ಣು, ಕಿವಿ ಮೂಗು, ಬಾಯಿ, ನಾಲಿಗೆ) ದಣಿಯುವುದರಿಂದ ತಮ್ಮ ತಮ್ಮ ವಿಷಯಗಳಿಂದ (ಉದಾ:- ಸ್ಪರ್ಶ, ರೂಪ, ರಸ, ಗಂಧ, ಶ್ರವಣ) ನಿವೃತ್ತವಾಗುತ್ತವೆಯೋ ಅಂದರೆ ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಿಂದ ಬೇರ್ಪಡುವವೋ ಆಗ ಮನುಷ್ಯನನ್ನು ನಿದ್ರೆ ಆವರಿಸುತ್ತದೆ. ಅಂದರೆ ಮನುಷ್ಯ ನಿದ್ರಿಸುತ್ತಾನೆ.
ನಿದ್ರೆಯ ಲಾಭಗಳು:
ಒಬ್ಬ ಆರೋಗ್ಯವಂತ ಮನುಷ್ಯನಿಗೆ ರಾತ್ರಿ ಸಾಮಾನ್ಯವಾಗಿ 7 ರಿಂದ 8 ತಾಸುಗಳಷ್ಟು ನಿದ್ರೆ ಅತ್ಯಗತ್ಯ. ಈ ಮಾಪನವು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಮಕ್ಕಳಲ್ಲಿ ಯುವಕರಲ್ಲಿ ಹಾಗೂ ವೃದ್ಧಾಪ್ಯದಲ್ಲಿ ವ್ಯತ್ಯಾಸಗೊಳ್ಳುತ್ತದೆ.
1. ಸುಖ ಪೂರ್ವಕವಾಗಿ ನಿದ್ರಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.
2. ಶರೀರದ ಪೋಷಣೆಯಾಗುತ್ತದೆ.
3. ಶರೀರದ ಬಲ ವೃದ್ಧಿಯಾಗುತ್ತದೆ.
4. ದೀರ್ಘವಾದ ಆಯುಸ್ಸನ್ನು ಒದಗಿಸುತ್ತದೆ.
5. ನಪುಂಸಕತೆಯನ್ನು ಹೋಗಲಾಡಿಸುತ್ತದೆ.
6. ದೇಹದ ಧಾತುಗಳು ಸಮ ಸ್ಥಿತಿಯಲ್ಲಿರುತ್ತವೆ.
ನಿದ್ರೆಯ ಭೇದಗಳು: 6 ವಿಧಗಳು:
1. ತಮೋಭವಾ:- ತಮೋ ಗುಣದ ಪ್ರಧಾನತೆಯಿಂದ ಉಂಟಾಗುವ ನಿದ್ರೆ.
2. ಶ್ಲೇಷ್ಮ ಸಮುದ್ಭವ:- ಕಫ ಪ್ರಧಾನತೆಯಿಂದ ಉತ್ಪತ್ತಿಯಾಗುವ ನಿದ್ರೆ.
3. ಮನ: ಶರೀರ ಶ್ರಮಸಂಭವ:- ಮನಸ್ಸಿನ ಹಾಗೂ ಶರೀರದ ಆಯಾಸದಿಂದ ಉತ್ಪತ್ತಿಯಾಗುವ ನಿದ್ರೆ.
4. ಆಗಂತುಕಿ ನಿದ್ರೆ:- ಇದು ಆಗಂತುಕ ಕಾರಣಗಳಿಂದ (ರೋಗ ಇತ್ಯಾದಿ) ಉತ್ಪತ್ತಿಯಾಗುವ ನಿದ್ರೆ.
5. ವ್ಯಾದ್ಯನುವರ್ತಿನಿ:- ರೋಗಗಳ ಸಂದರ್ಭದಲ್ಲಿ ಉಂಟಾಗುವ ನಿದ್ರೆ ಅಥವಾ ರೋಗ ಶಮನದ ನಂತರ ಅವುಗಳೊಂದಿಗೆ ಉತ್ಪತಿಯಾಗುವ ನಿದ್ರೆ.
6. ರಾತ್ರಿಸ್ವಭಾವ ಪ್ರಭಾವ:- ಇದು ಸ್ವಾಭಾವಿಕವಾಗಿದ್ದು ರಾತ್ರಿಯಲ್ಲಿ ಉತ್ಪತ್ತಿಯಾಗುವ ನಿದ್ರೆ.
ಇವುಗಳಲ್ಲಿ ತಮೋ ಭವ ಹಾಗೂ ರಾತ್ರಿ ಸ್ವಭಾವ ಪ್ರಭವ ವಿಧದ ನಿದ್ರೆಗಳು ಸ್ವಾಭಾವಿಕ. ಉಳಿದವುಗಳೆಲ್ಲವೂ ರೋಗಗಳಲ್ಲಿ ಉತ್ಪತ್ತಿಯಾಗುವಂಥಹವುಗಳು.
ನಿದ್ರಾನಾಶಕ್ಕೆ ಕಾರಣಗಳು:
1. ಕೆಲಸದ ಒತ್ತಡ ಹಾಗೂ ಕೆಲಸದಲ್ಲಿ ನಿರತರಾಗಿರುವುದು.
2. ಅನಿಯಮಿತ ಕಾಲದಲ್ಲಿ ನಿದ್ರೆ ಮಾಡುವಂಥಹುದು.
3. ರೋಗಗಳು (ಉದಾ:- ಜ್ವರ, ಉನ್ಮಾದ, ಬ್ಲಡ್ ಪ್ರೆಷರ್).
4. ವಾತ ಹಾಗೂ ಪಿತ್ತ ಪ್ರಕೃತಿ ವ್ಯಕ್ತಿಗಳಲ್ಲಿ.
6. ವೃದ್ಧಾಪ್ಯದಲ್ಲಿ.
6. ಅತಿಯಾದ ಚಿಂತೆ, ಭಯ, ಶೋಕ, ಸಿಟ್ಟು ಇತ್ಯಾದಿಗಳೂ ಕೂಡ ನಿದ್ರೆಯನ್ನು ನಾಶಮಾಡುತ್ತವೆ.
ನಿದ್ರಾನಾಶದ ಚಿಕಿತ್ಸೆಗಳು:
1. ಅಭ್ಯಂಗ:- ಪ್ರತಿ ನಿತ್ಯವೂ ಮೈಗೆ ಎಣ್ಣೆಯನ್ನು ಹಚ್ಚುವುದು.
2. ಉತ್ಸಾದನ:- ಎಣ್ಣೆ ಹಚ್ಚಿ ಮೈಯನ್ನು ಕ್ರಮಬದ್ಧವಾಗಿ ಉಜ್ಜುವುದು.
3. ಸ್ನಾನ:- ಬಿಸಿ ನೀರಿನಿಂದ ಸ್ನಾನ ಮಾಡುವುದು.
4. ಕೆಂಪು ಅಕ್ಕಿ ಅಥವಾ 60 ದಿನಗಳಲ್ಲಿ ಬೆಳೆದ ಅಕ್ಕಿಯ ಅನ್ನವನ್ನು ಮೊಸರಿನ ಜೊತೆಗೆ ಸೇವನೆ ಮಾಡುವುದು ಹಿತಕರ.
5. ಬಿಸಿಯಾದ ಹಾಲಿಗೆ ತುಪ್ಪ ಮತ್ತು ಕಲ್ಲುಸಕ್ಕರೆಯನ್ನು ಅಥವಾ ಬೆಲ್ಲವನ್ನು ಸೇರಿಸಿ ಸೇವಿಸುವುದು ಉತ್ತಮ
6. ಮನಸ್ಸಿಗೆ ಅನುಕೂಲಕರವಾದ ಸುವಾಸನೆಯನ್ನು ಆಘ್ರಾಣಿಸುವುದು. (ಉದಾ:- ಊದುಬತ್ತಿ ಅಥವಾ ಸೆಂಟ್‍ಗಳು ಸುವಾಸನೆ)
7. ತಲೆ ಮತ್ತು ಮುಖದ ಮೇಲೆ ಶೀತ ದ್ರವ್ಯಗಳ ಲೇಪವನ್ನು ಹಚ್ಚುವುದು.
8. ಪಾದಾಭ್ಯಂಗ (ಮಲಗುವ ಮುನ್ನ ಅಂಗಾಲುಗಳಿಗೆ ಎಣ್ಣೆಯನ್ನು ಹಚ್ಚಿ ಉಜ್ಜುವುದು)
9. ಸುಖವಾದ, ಸ್ವಚ್ಛವಾದ, ಮೃದುವಾದ ಹತ್ತಿಯಿಂದ ತಯಾರಿಸಿದ ಹಾಸಿಗೆಯಲ್ಲಿ ಮಲಗುವುದು.
10. ಮನಸ್ಸಿಗೆ ಹಿತವೆನಿಸುವ ಕತೆಗಳನ್ನು, ಪುಸ್ತಕಗಳನ್ನು ಓದುವುದು ಇತ್ಯಾದಿ.
11. ನಸ್ಯ:- ಎರಡೆರಡು ಹನಿ ಆಕಳ ತುಪ್ಪವನ್ನು ಕರಗಿಸಿ ಎರಡೂ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳುವುದು.
ಶರೀರದ ಧಾರಣೆಗೆ ಹೇಗೆ ನಿಯಮಪೂರ್ವಕವಾದ ಆಹಾರದ ಸೇವನೆಯು ಅವಶ್ಯಕವೋ ಅದೇ ರೀತಿ ನಿಯಮಪೂರ್ವಕವಾದ ನಿದ್ರೆಯು ಅತ್ಯವಶ್ಯಕ.
ಡಾ. ನಾಗಶ್ರೀ ಕೆ.ಎಸ್.