“ಎಂಥಾ ಹದವಿತ್ತೆ ಗೆಳತಿ ಹರೆಯಕೆ ಏನೋ ಮುದವಿತ್ತೆ….” ಎನ್ನುವ ಕವಿವಾಣಿ ಪ್ರಾಯಶ: ಸಾಹಿತ್ಯೋಪಾಸಕರು, ಸಂಗೀತ ಆರಾಧಕರು ಕೇಳಿರುತ್ತಾರೆ. ಹದಿ ಹರೆಯದ ಮಾನಸಿಕ ತುಮುಲಗಳು ಇಲ್ಲಿ ಅಭಿವ್ಯಕ್ತಗೊಂಡಿವೆ.
ಹೆಣ್ಣು ತನ್ನ ಜೀವನದ ಪಯಣದಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ ತುಂಬಾ ಜವಾಬ್ದಾರಿಯುತ ಘಟ್ಟಗಳನ್ನು ಕ್ರಮಿಸುತ್ತಾಳೆ. ಈ ಎಲ್ಲ ಘಟ್ಟಗಳಲ್ಲಿ ನೋವು, ನಲಿವು, ಬೇಸರ, ಆತಂಕ ಎಲ್ಲವೂ ಸಹಜ. ಬಾಲ್ಯದ ಮುಗ್ಧತೆ ಕಳೆದು ಯೌವನದ ಪ್ರೌಢಿಮೆಯು ಆವರಿಸುವ ಸಮಯ ಚೆಲ್ಲು ಚೆಲ್ಲಾಗಿ ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಅಡುಗೆ ಆಟಗಳನ್ನು ಸಂಗಡಿಗರೊಂದಿಗೆ ಆಡಿಕೊಂಡಿದ್ದ ಹುಡುಗಿ ಒಮ್ಮೆಲೇ ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ಗಂಭೀರಳಾಗಿ ಬಿಡುತ್ತಾಳೆ. ಹದಿ ವಯಸ್ಸಿನ ಮಹಿಮೆಯೇ ಅಂಥಹುದು. ಹಿಂದೆಲ್ಲ 13 ವರ್ಷದ ನಂತರವೇ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಇತ್ತೀಚಿನ ದಿನಗಲ್ಲಿ ವಾತಾವರಣ, ತಿನ್ನುವ ಆಹಾರ ಒತ್ತಡದ ಜೀವನ, ದೈಹಿಕ ಶ್ರಮ ಇಲ್ಲದಿರುವುದು, ಬೇರೆ ಬೇರೆ ರೂಪದಲ್ಲಿ ರಾಸಾಯನಿಕಗಳ ಸೇವನೆ ಇವೆಲ್ಲವುಗಳ ಪರಿಣಾಮ 9 ವರ್ಷಕ್ಕೆಲ್ಲ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಹೆತ್ತವರ ಜವಾಬ್ದಾರಿ ಇನ್ನಷ್ಟು ಹೆಚ್ಚು. ತಾಯ್ತನ ಎನ್ನುವುದು ಹೆಣ್ಣಿಗೆ ವರದಾನ ಹೆಣ್ಣು ಋತುಮತಿಯಾಗುವುದು ಗರ್ಭಧಾರಣೆಗೆ ಹೆಣ್ಣಿನ ದೇಹ ಸಜ್ಜಾಗುತ್ತಿರುವುದರ ಸಂಕೇತ ಹದಿ ವಯಸ್ಸಿನವರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತವೆ. ಮೆದುಳಿನಲ್ಲಿರುವ ತೈರೋಥ್ಯಾಲವಸ್ ಎಂಬ ಗ್ರಂಥಿಯು ಸ್ರವಿಸುವ ಹಾರ್ಮೋನುಗಳೇ ಈ ಬದಲಾವಣೆಗಳಿಗೆ ಕಾರಣ ಕರ್ತೃ. ಈ ಹಾರ್ಮೋನುಗಳ ಕ್ರಿಯೆಯಿಂದಲೇ ಹೆಣ್ಣು ಋತುವತಿಯಾಗುವುದು. ಈ ಎಲ್ಲ ಪ್ರಕ್ರಿಯೆಗಳು 11 ರಿಂದ 12 ವರ್ಷದ ಅವಧಿಯಲ್ಲಿ ನಡೆಯುವುದು. “ನಾವು ಏನನ್ನು ಬಿತ್ತುತ್ತೇವೆಯೋ ಅದನ್ನೇ ಬೇಳೆಯುತ್ತೇವೆ” ಎನ್ನುವ ನಾನ್ನುಡಿಯಂತೆ ಬೇವಿನ ಬೀಜವನ್ನು ಬಿತ್ತಿದರೆ ಬೇವಿನ ಮರವನ್ನು ಬೆಳೆಯುತ್ತೇವೆ. ಅದರಂತೆ ಮಾವಿನ ಬೀಜವನ್ನು ಬಿತ್ತಿದರೆ ಮಾವಿನ ಮರವನನ್ನು ಪಡೆಯುತ್ತೇವೆ. ಈ ತರದಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಜೊತೆಗೆ ಸ್ವಚ್ಛತೆ, ಪೌಷ್ಠಿಕ ಆಹಾರದ ಸೇವನೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಇದರಿಂದ ಸ್ವಸ್ಥ, ಸದೃಢ ಸಮಾಜದ ನಿರ್ಮಾಣವೂ ಸಾಧ್ಯ.
ಋಯುಸ್ರಾವವು ಮೊಲದ ರಕ್ತದಂತೆ, ಲಾಕ್ಷಾ ರಸದಂತೆ (ಅರಗಿನಂತೆ) ಇರಬೇಕು. ಅಲ್ಲದೆ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದರೆ ಕಲೆಗಳು ಉಳಿಯುವಂತಿರಬಾರದು ಎನ್ನುವುದು ಆಯುರ್ವೇದಾಚಾರ್ಯರ ಅಭಿಮತ. ಅಲ್ಲದೆ ವಾತ ದೋಷದಿಂದ ಕೂಡಿದ (ಚುಚ್ಚುವಂತೆ ನೋವಿನಿಂದ ಕೂಡಿದ್ದು, ಕಪ್ಪು ಬಣ್ಣವನ್ನು ಹೊಂದಿರುವಂಥದ್ದು), ಪಿತ್ತ ದೋಷದಿಂದ ಕೂಡಿದ (ಉರಿಯನ್ನು ಹೊಂದಿದ್ದು, ಹಳದಿ, ನೀಲಿ ಬಣ್ಣದಿಂದ ಕೂಡಿದ), ಕಫ ದೋಷದಿಂದ ಕೂಡಿದ (ತುರಿಕೆಯನ್ನು ಹೊಂದಿದ್ದು, ಬಿಳಿ ಬಣ್ಣದಿಂದ ಕೂಡಿದ), ಕುಣಪ (ದುರ್ಗಂಧಯುಕ್ತ, ಗ್ರಂಥಿ (ಗಂಟುಗಳಿಂದ ಕೂಡಿದ), ಪೂಲೆ ಪೂಯ (ಕೀವು, ಸ್ರಾವದಿಂದ ಕೂಡಿದ) ಮೂತ್ರ, ಮಲಯುಕ್ತ ರಕ್ತ ಸ್ರಾವವು ಪ್ರಜೋತ್ಪಾದನೆಗೆ ಅಂದರೆ ಗರ್ಭಧಾರಣೆಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಋತುಸ್ರಾವವು ಪ್ರತಿ ತಿಂಗಳು ಬಾರದಿರಬಹುದು. ಸಾಮಾನ್ಯವಾಗಿ ಋತುಚಕ್ರದ ಅವಧಿ 21 ರಿಂದ 25 ದಿನಗಳು ಋತುಚಕ್ರ ಆರಂಭವಾದ ಒಂದು ವರ್ಷದೊಳಗೆ ನಿಯಮಿತ ಋತುಚಕ್ರ ಆರಂಭವಾಗುತ್ತದೆ. ಅಲ್ಲದೆ ಸ್ರಾವವು ಎಲ್ಲರಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರಲ್ಲಿ ಮೂರು ದಿನಗಳಿದ್ದರೆ ಮತ್ತೆ ಕೆಲವರಲ್ಲಿ ಏಳರಿಂದ ಎಂಟು ದಿನಗಳಿರಬಹುದು.
ಋತುಮತಿ (ಹದಿಹರಯದ ಹೆಣ್ಣು) ಯಲ್ಲಿ ದೈಹಿಕ ಹಾಗು ಮಾನಸಿಕ ಬದಲಾವಣೆಗಳು
ಮುಖದಲ್ಲಿ ಪ್ರಸನ್ನತೆ, ವಿರುದ್ಧ ಲಿಂಗದವರೊಡನೆ ಆಕರ್ಷಣೆ, ಪ್ರಸನ್ನ ಮನಸ್ಸು ಪ್ರಿಯವಾದ ಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ, ಕೆಳಮುಖವಾಗಿರುವ ಹೊಟ್ಟೆಯ ಭಾಗ, ನೆಲವನ್ನೇ ನೋಡುತ್ತಿರುವಂತಹ ಕಣ್ಣುಗಳು ಹಾಗೂ ತಲೆ, ಭುಜ, ಎದೆ, ಸೊಂಟ ತೊಡೆ, ನಾಭಿ (ಹೊಕ್ಕಳು) ಪ್ರದೇಶಗಳಲ್ಲಿ ಕೊಬ್ಬಿನ ಶೇಖರಣೆ – ಇವೆಲ್ಲವುಗಳು “ಋತುಮತಿ” ಯಾದ ಹೆಣ್ಣಿನ ಲಕ್ಷಣಗಳು ಎನ್ನುವುದು ಸುಶ್ರುತಾಚಾರ್ಯರ ಅಭಿಪ್ರಾಯ. ಇವಲ್ಲದೆ ಕಂಕುಳು ಹಾಗೂ ಯೋನಿ ಮಾರ್ಗದ ಸುತ್ತಲೂ ದಪ್ಪನೆಯ ಒರಟಾದ ಕೂದಲುಗಳು ಬೆಳೆಯುತ್ತವೆ.
ಹದಿಯರೆಯದವರು ತಮ್ಮನ್ನು ತಾವು ಸಮಾಜದೊಂದಿಗೆ ಗುರುತಿಸಿಕೊಳ್ಳಲು ಹೆಣಗುತ್ತಾರೆ, ಮಕ್ಕಳೊಟ್ಟಿಗೂ ಬೆರೆಯಲಾಗದೆ, ದೊಡ್ಡವರೊಂದಿಗೂ ಗುರುತಿಸಿಕೊಳ್ಳಲಾಗದ ಈ ಅವಸ್ಥೆಯನ್ನು ಮಾನಸಿಕ ತಜ್ಞರು “Identity Crisis” ಎನ್ನುತ್ತಾರೆ. ಸಿನಿಮಾಗಳಲ್ಲಿ ದೂರದರ್ಶನಗಳಲ್ಲಿ ನಟ, ನಟಿಯರ ಸ್ಥಾನಗಳಲ್ಲಿ ತಮ್ಮನ್ನೇ ಕಲ್ಪಸಿಕೊಳ್ಳುತ್ತಾರೆ, ಬಾಲ್ಯದ ತುಂಟತನ ಕಳೆದು ನಿಧಾನವಾಗಿ ಜವಾಬ್ದಾರಿ ಅಡಿಯಿಡುತ್ತದೆ. ಮಾನಸಿಕ ತುಮುಲ, ಗಾಬರಿ ಹಾಗೂ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ನಾಚಿಕೆ ಸಂತೋಷ, ಕುತೂಹಲ, ಕಲ್ಪನೆಗಳು ಏಕಕಾಲದಲ್ಲಿ ಮೂಡುವುದು. ಹದಿಹರೆಯದ ಹೆಣ್ಣು ಮಕ್ಕಳು ತಮ್ಮದೇ ವಯಸ್ಸಿನವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದರೊಂದಿಗೆ ಮಾಸಿಕ ಋತುಸ್ರಾವವೂ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ದೈಹಿಕ ಬದಲಾವಣೆಗಳಿಗೆ ಹೆಣ್ಣು ತನ್ನನ್ನು ತಾನು ಮಾನಸಿಕವಾಗಿ ತಯಾರಿ ನಡೆಸಿಕೊಳ್ಳಬೇಕಾಗುವುದು. ಇದರಲ್ಲಿ ತಾಯಿಯ ಪಾತ್ರವೂ ಮುಖ್ಯವಾಗಿರುತ್ತದೆ.
ಬೇಳೆ ಕಾಳುಗಳು ಸೊಪ್ಪು ತರಕಾರಿ, ಹಣ್ಣುಗಳು, ಹಾಲು ಮೊಸರು, ತುಪ್ಪ ಎಲ್ಲವನ್ನು ಒಳಗೊಂಡಿರುವ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ. ತುಪ್ಪದ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೆ, ಇದು ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಎಳ್ಳನ್ನು ಹುರಿದು, ಬೆಲ್ಲದ ಪಾಕವನ್ನು ತಯಾರಿಸಿ ಅದಕ್ಕೆ ಎಳ್ಳು ಹಾಕಿ ತಯಾರಿಸಿದ ಮಾಡಿದ ಎಳ್ಳುಂಡೆಯೂ ಕೂಡ ರಕ್ತಸ್ರಾವವನ್ನು ನಿಯಮಿತವಾಗಿ ಮಾಡುವುದಲ್ಲದೆ, ವಾತ ಶಮನವನ್ನು ಮಾಡುವುದು.
ವ್ಯಾಯಾಮ: ಕ್ರಮಬದ್ಧವಾದ ವ್ಯಾಯಾಮದಿಂದ ದೇಹ ಸದೃಢಗೊಳ್ಳುವುದು. ಯೋಗ ಹಾಗೂ ಪ್ರಾಣಾಯಾಮಗಳೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತಜ್ಞರಿಂದ ಕಲಿತು ಅಭ್ಯಾಸ ಮಾಡುವುದು ಉತ್ತಮ.
1. ದಿನಕ್ಕೊಮ್ಮೆ ಒಂದು ಲೋಟ ಹಾಲಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
2. ಆಹಾರದಲ್ಲಿ ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಮೆಂತ್ಯ, ಸಬ್ಬಸ್ಸಿಗೆ ಸೊಪ್ಪು, ಇತ್ಯಾದಿಗಳ ಬಳಕೆ ಮಾಡುವುದರಿಂದಲೂ ರಕ್ತವು ವೃದ್ಧಿಯಾಗುವುದು.
3. ಖರ್ಜೂರ, ಒಣದ್ರಾಕ್ಷಿಗಳು ಕೂಡ ರಕ್ತವರ್ಧನೆಗೆ ಸಹಾಯಕಾರಿ.
ಮುಂದುವರೆಯುವುದು….
ನಾಗಶ್ರಿ. ಕೆ.ಎಸ್.