Home Kids ಶಿಕ್ಷೆಯಿಲ್ಲದ ಶಿಕ್ಷಣ ಸಾಧ್ಯ

ಶಿಕ್ಷೆಯಿಲ್ಲದ ಶಿಕ್ಷಣ ಸಾಧ್ಯ

0

ಶಿಕ್ಷಣದಲ್ಲಿ ಶಿಕ್ಷೆ ಅನಿವಾರ್ಯ ಎನ್ನುವುದು ನಮ್ಮೆಲ್ಲರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇದು ಲಾಗಾಯ್ತಿನಿಂದಲೂ ಬಂದ ನಂಬಿಕೆಯಾದ್ದರಿಂದ ಶಿಕ್ಷೆಯಿಲ್ಲದ ಶಿಕ್ಷಣ ಅಸಾಧ್ಯ ಎಂದುಕೊಂಡಿದ್ದೇವೆ. ಸ್ವಲ್ಪ ಭಿನ್ನವಾಗಿ ಯೋಚನೆ ಮಾಡಿದಾಗ ನಮ್ಮ ನಂಬಿಕೆಯ ಟೊಳ್ಳುತನ ಹೊರಬರುತ್ತದೆ.
ಮಕ್ಕಳು ದೈಹಿಕವಾಗಿ ನಮಗಿಂತ ದುರ್ಬಲರು, ಕಡಿಮೆ ಪ್ರಾಪಂಚಿಕ ಜ್ಞಾನವುಳ್ಳವರು, ಮತ್ತು ಭಾವನಾತ್ಮವಾಗಿ ಪೋಷಕರು ಹಾಗೂ ಸ್ವಲ್ಪ ಮಟ್ಟಿಗೆ ಉಪಾಧ್ಯಾಯರ ಮೇಲೆ ಅವಲಂಬಿತರು. ಇದಿಷ್ಟೇ ಕಾರಣಗಳಿಂದ ನಾವು ಅವರ ಮೇಲೆ ಶಿಕ್ಷೆಯೆಂಬ ದಬ್ಬಾಳಿಕೆಯನ್ನು ಹೇರುತ್ತೇವೆ. ಮಕ್ಕಳು ಬೆಳೆಯುತ್ತಾ ಬಂದಂತೆ ಅವರು ಬದಲಾಗಲೀ ಬಿಡಲಿ, ನಮ್ಮ ಶಿಕ್ಷೆಯ ಮಟ್ಟ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಕಾಲೇಜುಗಳಲ್ಲಿ ಅಥವಾ ವಯಸ್ಕರ ಶಿಕ್ಷಣದ ಶಾಲೆಗಳಲ್ಲಿ, ವಿದ್ಯಾರ್ಥಿಗಳು ಹೇಗೇ ಇರಲಿ, ಯಾವ ಉಪಾಧ್ಯಾಯನೂ ಶಿಕ್ಷೆಯನ್ನು ಕೊಡುವ ಧೈರ್ಯಮಾಡಲಾರ! ಅಷ್ಟೇ ಏಕೆ ದೈಹಿಕವಾಗಿ ಕಟ್ಟುಮಸ್ತಾಗಿರುವ ಮಾದ್ಯಮಿಕ ಅಥವಾ ಪ್ರೌಢಶಾಲಾ ವಿದ್ಯಾರ್ಥಿಗಳ ಮೈಮುಟ್ಟುವ ತಪ್ಪನ್ನು ನಮ್ಮ ಶಿಕ್ಷಕರು ಮಾಡಲಾರರು. ಹೆಚ್ಚೆಂದರೆ ಅವನನ್ನು ತರಗತಿಯಿಂದ ಹೊರಹಾಕಬಹುದು ಅಷ್ಟೇ! ಇದರ ಅರ್ಥ ಶಿಕ್ಷಕರು ತಮ್ಮ ಅಜ್ಞಾನ, ದೌರ್ಬಲ್ಯ, ಅಸಹಾಕತೆಗಳನ್ನು ದೈಹಿಕ ಶಕ್ತಿಯ ಮೂಲಕ ಮುಚ್ಚಿ ಹಾಕಲು ಶಿಕ್ಷೆಯ ಹೆಸರಿನಲ್ಲಿ ಯತ್ನಿಸುತ್ತಾರೆ ಎನ್ನುವುದಕ್ಕಿಂತ ಬೇರೇನಿರಲು ಸಾಧ್ಯ ಹೇಳಿ?
ಶಿಕ್ಷೆ ಅನಿವಾರ್ಯ ಎಂದು ನಂಬಿಕೊಂಡಿರುವುದರಲ್ಲಿ ಶಿಕ್ಷಕರ ತಪ್ಪೇನಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ನಾವು ಹಾಗೆ ಕಟ್ಟಿದ್ದೇವೆ. ಮಕ್ಕಳನ್ನು ಯಂತ್ರಗಳನ್ನಾಗಿಸಿ, ಕಲಿಕೆಯ ವಿಷಯಗಳನ್ನು ಸ್ಟಾಂಡರ್ಡೈಸ್ ಮಾಡಿ, ಹೆಚ್ಚು ಅಂಕಗಳಿಕೆ ಮಾತ್ರ ಉತ್ತಮ ಕಲಿಕೆ ಎಂದುಕೊಂಡಿರುವುದಕ್ಕಾಗಿ ಶಾಲೆಯಲ್ಲಿ ಶಿಕ್ಷೆಯೆಂಬುದು ಅನಿವಾರ್ಯವಾಗಿದೆ. ಅಂಕಗಳಿಕೆ ಒತ್ತಡ ಹೇರುವುದು ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದುಕೊಂಡರೆ ಶಿಕ್ಷಕರು ತಮ್ಮ ಶಾಲೆಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದುಕೊಂಡಿದ್ದಾರೆ! ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದು ಮೂಲಭೂತವಾಗಿ ಪೋಷಕರ ಜವಾಬ್ದಾರಿ. ಇದಕ್ಕೆ ಶಿಕ್ಷಕರು ಸಹಾಯ ಮಾಡಬಹುದು ಅಷ್ಟೇ. ಶಿಕ್ಷಕರೇ ಮಕ್ಕಳಿಗೆ ಹೆಚ್ಚು ಅಂಕ ಕೊಡಿಸಲು ಶಿಕ್ಷೆಯೆಂಬ ಹಿಂಸೆಗೆ ಏಕೆ ಇಳಿಯಬೇಕು ಎನ್ನುವುದು ಒಂದು ವಿಪರ್ಯಾಸ. ಶಾಲೆಯ ದುಬಾರಿ ಫೀಸುಗಳನ್ನು ಕಟ್ಟವುದಷ್ಟೇ ತಮ್ಮ ಜವಾಬ್ದಾರಿ ಎಂದು ಪೋಷಕರು ಅಂದುಕೊಂಡಾಗ ಮತ್ತು ಮುಂದಿನ ವರ್ಷ ಹೆಚ್ಚು ಫೀಸನ್ನು ಕಕ್ಕಿಸುವ ಉದ್ದೇಶವನ್ನು ಮಾತ್ರ ಶಿಕ್ಷಕರು ಹೊಂದಿದ್ದಾಗ ಇಂತಹ ವಿಕೃತಿಗಳನ್ನು ಮಕ್ಕಳ ಮೇಲೆ ನಾವು ಹೇರುತ್ತೇವೆ.
ನನ್ನ ಅಭೀಪ್ರಾಯದಲ್ಲಿ ಶಿಕ್ಷಕರು ಯಾವುದೇ ರೀತಿಯ ದೈಹಿಕ ಶಿಕ್ಷೆಯನ್ನು ಕೊಡಲೇಬಾರದು. ಮಕ್ಕಳ ಮೇಲಿನ ಶಿಕಾಯತುಗಳನ್ನು ಪೋಷಕರಿಗೆ ವರದಿ ಮಾಡುವುದು ಮತ್ತು ಅವರ ಸರ್ವತೋಮುಖ ಅಭಿವೃಧ್ದಿಗೆ ಸಹಕರಿಸುವುದು ಇದಿಷ್ಟೇ ಅವರ ಜವಾಬ್ದಾರಿಗಳಾಗಿರಬೇಕು. ಪೋಷಕರು ತಮ್ಮ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು. ಹಾಗಂತ ಅವರು ಬೇಕಾಬಿಟ್ಟಿ ಶಿಕ್ಷೆಯನ್ನು ಕೊಡಬಹುದು ಅಂತೇನಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅದಕ್ಕೆ ಎರಡು ರೀತಿಯ ಕಾರಣಗಳಿರಬಹುದು. ಮೊದಲನೆಯದು ಅವರಿಗೆ ವಿಷಯದಲ್ಲಿ ಆಸಕ್ತಿ ಇಲ್ಲದಿವುದು, ಕಲಿಕೆಯ ತೊಂದರೆಗಳು, ಅಸಮರ್ಪಕ ಅಥವಾ ಅಹಿತಕರ ವಾತಾವರಣ, ಸೂಕ್ತ ಪರಿಕರದ ಅಭಾವ ಮುಂತಾದವು. ಅಂದರೆ ಇವುಗಳು ಮಕ್ಕಳ ಕೈಮೀರಿದ್ದು. ಇವುಗಳನ್ನು ಶಿಕ್ಷೆಯಿಂದ ಬದಲಾಯಿಸಲು ಯತ್ನಿಸದೆ ಶಿಕ್ಷಣದ ಮಾರ್ಗಗಳತ್ತ ಗಮನಹರಿಸಬೇಕು. ಇಲ್ಲಿ ಶಿಕ್ಷೆ ನಿರುಪಯುಕ್ತವಷ್ಟೇ ಅಲ್ಲ ಅಪಾಯಕಾರಿಯೂ ಆಗಬಹುದು.
ಎರಡನೆಯದು ಮಕ್ಕಳ ಅಶಿಸ್ತು ಬೇಜವಾಬ್ದಾರಿ, ಸುಳ್ಳು ಹೇಳುವಿಕೆ, ಹಿಂಸಾಪ್ರವೃತ್ತಿ ಮುಂತಾದ ವರ್ತನೆಗೆ ಸಂಬಂಧಿಸಿದ ಅಂಶಗಳು ಮಕ್ಕಳನ್ನು ಶಿಕ್ಷಣದಲ್ಲಿ ಹಿಂದುಳಿಯುವಂತೆ ಮಾಡಬಹುದು. ಇದರ ಮೂಲ ಕಾರಣ ಮನೆಯಲ್ಲಿರುವ ವಾತಾವರಣವಾದ್ದರಿಂದ ಪೋಷಕರೇ ಇದನ್ನು ಸರಿಪಡಿಸಬೇಕು. ಇಲ್ಲಿ ಒಂದು ಮಟ್ಟದವರೆಗೆ ಶಿಕ್ಷೆ ಪರಿಣಾಮ ನೀಡಬಹುದು. ಹಾಗಿದ್ದರೂ ಕೂಡ ಶಿಕ್ಷೆಗಿಂತ ಶಿಕ್ಷೆಯ ಭಯ ಹೆಚ್ಚು ಪರಿಣಾಮಕಾರಿ. ಹೆಚ್ಚಿನ ಪ್ರಮಾಣದ ವರ್ತನೆಯ ತೊಂದರೆಗಳಿದ್ದರೆ ಮನಶ್ಯಾಸ್ತ್ರಜ್ಞರ ಸಹಾಯ ಬೇಕಾಗಬಹುದು. ಇದೂ ಕೂಡ ಪೋಷಕರ ಮೂಲಕವೇ ಆಗಬೇಕಾಗಿರುವ ಕೆಲಸ.
ಆದ್ದರಿಂದ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರನ್ನು ಸಕ್ರಿಯವಾಗಿ ಭಾಗಿಗಳನ್ನಾಗಿ ಮಾಡಬೇಕು. ಅದಿಲ್ಲದಿದ್ದರೆ ಹಣದಿಂದ ಎಲ್ಲವನ್ನೂ ಕೊಳ್ಳಬಹುದು ಎಂದುಕೊಳ್ಳುವ ಪೋಷಕರು ತಮ್ಮ ಮಕ್ಕಳು ಎತ್ತ ಸಾಗುತ್ತಿದ್ದಾರೆ ಎಂದು ತಿಳಿಯುವ ಗೋಜಿಗೇ ಹೋಗದೆ ಹೆಚ್ಚು ಹೆಚ್ಚು ಹಣಗಳಿಸುವದರಲ್ಲಿ ಮಾತ್ರ ತೊಡಗಿರುತ್ತಾರೆ. ಇದರಿಂದಾಗಿಯೇ ಇವತ್ತು ಸಾಕಷ್ಟು ಶ್ರೀಮಂತರ ಮಕ್ಕಳು ಸಾಮಾಜಿಕವಾಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬೆಳೆವಣಿಗೆಯ ಹಂತದಲ್ಲಿ ಮಕ್ಕಳಿಗೆ ಸೂಕ್ತವಾದ ತಿಳುವಳಿಕೆ, ತರಬೇತಿಯನ್ನು ನೀಡದೆ, ಅವರಿಗೆ ಸರಿಯಾದ ಮಾದರಿಯಾಗದೆ, ಅವರನ್ನು ಶಾಲೆಗಳಲ್ಲಿ ಶಿಕ್ಷೆಗೆ ಒಡ್ಡುವುದು ಪೋಷಕರ ಸಂಪೂರ್ಣ ಬೇಜಾವಬ್ದಾರಿತನ. ಹಾಗಾಗಿ ಶಿಕ್ಷೆಯನ್ನು ಕೊಡಲೇ ಬೇಕಾಗಿದ್ದರೆ ಅದನ್ನು ಪೋಷಕರಿಗೆ ಕೊಡಬೇಕೇ ಹೊರತು ಮಕ್ಕಳಿಗಲ್ಲ!
ವಸಂತ್ ನಡಹಳ್ಳಿ