Home Blogroll “ಸ್ಕೋಪ್”ನ ಬೆನ್ನು ಹತ್ತಿ

“ಸ್ಕೋಪ್”ನ ಬೆನ್ನು ಹತ್ತಿ

0

“ಈಗೆಲ್ಲಾ ಕಂಪ್ಯೂಟರ್ ಸೈನ್ಸ್‍ಗೆ ಸ್ಕೋಪಿಲ್ಲ, ಎಲೆಕ್ಟ್ರಾನಿಕ್ಸ್‍ಗೇ ಸೇರಿಕೊಬೇಕು;
ಬೇಸಿಕ್ ಸೈನ್ಸ್‍ಗೆ ಇನ್ನು ಮುಂದೆ ಬಾಳಾ ಸ್ಕೊಪಿರುತ್ತೆ. ಅದಕ್ಕೆ ಹೋಗಿ;
ಸಿಎ ಮಾಡಿದರೆ ನೋಡು ಯಾವಾಗಲೂ ಸ್ಕೋಪಿರತ್ತೆ:
ಬಿಎ, ಎಂಬಿಎ ಗೆಲ್ಲಾ ಏನೇನೂ ಸ್ಕೋಪಿಲ್ಲ, ಬರೀ ದುಡ್ಡು ದಂಡಕ್ಕೆ ಅದನ್ನು ಯಾಕೆ ಓದ್ತೀರಾ”
ಪಿ ಯು ಮುಗಿಯುತ್ತಿದ್ದಂತೆ ಪೋಷಕರು, ಸ್ನೇಹಿತರು, ಉಪಾಧ್ಯಯರು, ಕೌನ್ಸೆಲರ್‍ಗಳು-ಹೀಗೆ ಕಂಡಕಂಡವರೆಲ್ಲಾ ಅವರವರಿಗೆ ತಿಳಿದಂತೆ ಸಲಹೆಗಳನ್ನು ಕೊಡತೊಡಗುತ್ತಾರೆ. ಇವುಗಳ ಭಾರಕ್ಕೆ ನಲುಗಿ ಹೋದ ವಿದ್ಯಾರ್ಥಿಗಳು ಕೊನೆಗೆ ಏನೂ ನಿರ್ಧರಿಸಲಾರದೆ ತಮ್ಮ ಭವಿಷ್ಯದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿ ಯಾವುದಾದರೂ ಕೋರ್ಸ್‍ಗೆ ಸೇರುತ್ತಾರೆ.
ಈ “ಸ್ಕೋಪ್”ನ ಚಕ್ರವ್ಯೂಹವೇ ಅಂತಾದ್ದು. ಇನ್ನು ನಾಲ್ಕೈದು ವರ್ಷಗಳ ನಂತರ ಏನಾಗಬಹುದು ಎಂದು ಯಾರಿಗೂ ಖಚಿತವಾಗಿ ಹೇಳಲಾಗದಿರುವುದರಿಂದ ಎಲ್ಲರೂ ಅವರವರ ಲೆಕ್ಕಾಚಾರಗಳನ್ನು ಮುಂದಿಡುತ್ತಾ ಹೋಗುತ್ತಾರೆ. ತಮ್ಮ ಆಸಕ್ತಿಗಳೇನು ಎಂದು ನಿರ್ದಿಷ್ಟವಾಗಿ ಗುರುತಿಸಿಕೊಳ್ಳಲಾಗದ ವಿದ್ಯಾರ್ಥಿಗಳು ಯಾವ್ಯಾವುದೋ ಒತ್ತಡಕ್ಕೆ ಮಣಿದು ಓದನ್ನು ಮುಗಿಸುತ್ತಾರೆ. ಇದರಿಂದಾಗಿ ಅವರು ವೃತ್ತಿಜೀವನದಲ್ಲಿ ಅತೃಪ್ತರಾಗಿಯೇ ಕಳೆಯವ ಸಾಧ್ಯತೆಗಳಿರುತ್ತವೆ.
ನನ್ನ ಬಂಧುಗಳ ಮಗನೊಬ್ಬ ಗಣಿತದಲ್ಲಿ ಅದ್ಭುತ ಪ್ರತಿಭಾವಂತನಾಗಿದ್ದ. ಪ್ರೌಢಶಾಲೆಯಲ್ಲಿರುವಾಗಲೇ ಕಾಲೇಜಿನವರಿಗೆ ಗಣಿತದ ಲೆಕ್ಕ ಬಿಡಿಸುವುದಕ್ಕೆ ಸಹಾಯ ಮಾಡುತ್ತಿದ್ದ. ಹೈಸ್ಕೂಲ್‍ನ ನಂತರ ಅವರ ತಂದೆ ಅವನನ್ನು ಒತ್ತಾಯದಿಂದ ಕಲಾವಿಭಾಗಕ್ಕೆ ಸೇರಿಸಿದರು. ಪರಿಣಾಮ ಅಂದರೆ ಆತ ಪಿ ಯು ಪರೀಕ್ಷೆಯಲ್ಲಿ ಮೂರನೇ ದರ್ಜೆಗೆ ಇಳಿದ. ನಂತರ ಜೀವನೋಪಾಯಕ್ಕಾಗಿ ಏನೋ ದಾರಿ ಹುಡುಕಿಕೊಂಡರೂ ಆತನ ಗಣಿತದ ಪ್ರತಿಭೆ ಮುಕ್ಕಾಗಿಹೋಯಿತು.
ಇತ್ತೀಚಿನ ಇನ್ನೊಂದು ಘಟನೆ ನೋಡಿ. ನನ್ನ ಪರಿಚಿತರೊಬ್ಬರು ಮಗನನ್ನು ಒತ್ತಾಯದಿಂದ ಎಂಬಿಬಿಎಸ್‍ಗೆ ಕಳಿಸಿದರು. ಎರಡೇ ತಿಂಗಳಲ್ಲಿ ಆ ವಿದ್ಯಾರ್ಥಿ ಮನೆಗೆ ಹಿಂತಿರುಗಿದ. ಮುಂದಿನ ವರ್ಷ ಮತ್ತೆ ಅಖಿಲ ಭಾರತ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ತನ್ನಿಷ್ಟದಂತೆ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ.
ದುರಾದೃಷ್ಟವೆಂದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಹೀಗೆ ಪೋಷಕರ ವಿರುದ್ಧ ನಿಂತು ತಮ್ಮದೇ ದಾರಿಯನ್ನು ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನೂ ಹೆಚ್ಚಿನ ತೊಂದರೆ ಇರುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳ ಬಗೆಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಹಾಗಾಗಿ ಅವರೆಲ್ಲಾ “ಸ್ಕೋಪ್” ನ ಬೆನ್ನು ಹತ್ತುತ್ತಾರೆ.
ಇವತ್ತಿನ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳಿಗೂ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯದಲ್ಲಿ ಬರೀ ಮೇಲ್ಮೈ ಜ್ಞಾನಕ್ಕೆ ತೃಪ್ತರಾಗದೇ ಆಳವಾಗಿ ಅಧ್ಯಯನ ಮಾಡಬೇಕು. ಇದಕ್ಕೆ ಸಾಕಷ್ಟು ಶ್ರಮ, ಸಮಯ, ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಉನ್ನತ ಶಿಕ್ಷಣಕ್ಕೆ ಸ್ವಲ್ಪ ಮಟ್ಟಿನ ಹಣದ ಅಗತ್ಯವಿದ್ದರೂ ಅದಕ್ಕಿಂತ ಮುಖ್ಯವಾದದ್ದು ವಿದ್ಯಾರ್ಥಿಗಳಲ್ಲಿರಬೇಕಾದ ಗುರಿಯ ಬಗೆಗಿನ ಸ್ಪಷ್ಟ ಚಿತ್ರಣ.
ನಮ್ಮ ಅಭಿರುಚಿಗಳನ್ನು ಸರಿಯಾಗಿ ಗುರುತಿಸುವುದು ಅಂತಹ ಸರಳವಾದುದ್ದಲ್ಲ. ಹದಿವಯಸ್ಸಿನವರೆಗೆ ವೈದ್ಯರನ್ನು ನೋಡಿದರೆ ವೈದ್ಯ, ಹಾಡನ್ನು ಕೇಳಿದೊಡನೆ ಹಾಡುಗಾರ, ಕಾರ್ಖಾನೆಗಳನ್ನು ನೋಡಿದರೆ ಉದ್ಯಮಿ-ಹೀಗೆ ಕಂಡಿದ್ದೆಲ್ಲಾ ಆಗಬೇಕೆನ್ನುವ ಹಗಲು ಕನಸು ಕಾಣುತ್ತೇವೆ. ಸುಮಾರು ಹದಿನೆಂಟನೇ ವಯಸ್ಸಿಗೆ ಕವಲು ದಾರಿಯಲ್ಲಿ ನಿಂತಾಗ ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿ ಯಾವುದೋ ಒಂದು ದಾರಿಯಲ್ಲಿ ನುಗ್ಗುತ್ತೇವೆ. ಅದು ನಮ್ಮಿಷ್ಟದ ದಾರಿಯಲ್ಲ ಎಂದು ತಿಳಿಯುವಷ್ಟರಲ್ಲಿ ಹಿಂತಿರುಗಿ ಬರಲಾರದಷ್ಟು ದೂರ ಹೋಗಿರುವುದರಿಂದ ಅಲ್ಲಿಯೇ ಮುಂದುವರೆಯುವ ಅನಿವಾರ್ಯತೆ ಉಂಟಾಗಿರುತ್ತದೆ.
ಈ ದೃಷ್ಟಿಯಿಂದ ನೋಡಿದರೆ ವಿದ್ಯಾರ್ಥಿಗಳ ಅಭಿರುಚಿಗಳನ್ನು ಗುರುತಿಸುವುದರಲ್ಲಿ ಶಾಲಾ ಕಾಲೇಜುಗಳಿಗಿಂತ ಹೆಚ್ಚಿನ ಹೊಣೆಗಾರಿಕೆ ಪೋಷಕರ ಮೇಲಿರುತ್ತದೆ. ಹದಿನೆಂಟನೆ ವರ್ಷಕ್ಕೆ ಒಮ್ಮೆಲೆ ಮಕ್ಕಳಿಗೆ ನಿಮ್ಮ ಅಭಿರುಚಿಗಳನ್ನು ತಿಳಿಸಿ ಎಂದರೆ ಅವರಿಗೂ ತೊಳಲಾಟವುಂಟಾಗುತ್ತದೆ. ಮನಃಶಾಸ್ತ್ರಜ್ಞರು ನಡೆಸುವ “ಆಪ್ಟಿಟ್ಯೂಡ್ ಟೆಸ್ಟ್” ಗಳೂ ಕೂಡ ಸ್ಪಷ್ಟ ದಿಕ್ಸೂಚಿಯೇನೂ ಆಗಿರುವುದಿಲ್ಲ. ಹಾಗಾಗಿ ಬಾಲ್ಯದಿಂದಲೇ ಪೋಷಕರು ಮಕ್ಕಳ ಅಭಿರುಚಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾಗುತ್ತದೆ. ನಮ್ಮ ಮಕ್ಕಳಲ್ಲಿ ಹೇಳಿಕೊಳ್ಳುವಂತಹ ಏನೂ ವಿಶೇಷವಿಲ್ಲ ಎಂದು ಯಾವ ಪೋಷಕರೂ ಅಂದುಕೊಳ್ಳಲೇಬಾರದು. ಐ್ರನ್ಸಾಕ್ಷನಲ್ ಅನಾಲಿಸಿಸ್ ಎನ್ನುವ ಮನೋಚಿಕಿತ್ಸಾ ವಿಧಾನವನ್ನು ರೂಪಿಸಿದ ಎರಿಕ್ ಬರ್ನ್ ಹೇಳುತ್ತಾನೆ, “ನಮ್ಮ ಮಕ್ಕಳು ರಾಜಕುಮಾರ/ರಿಯರಾಗಿ ಹುಟ್ಟುರುತ್ತಾರೆ, ನಾವು ಅವರನ್ನು ಕಪ್ಪೆಗಳನ್ನಾಗಿ ಮಾಡುತ್ತೇವೆ”.
ಆದ್ದರಿಂದ ಮಕ್ಕಳ ಅಭಿರುಚಿಗಳನ್ನು ಗೌರವಿಸಿ, ಅವರಿಗೆ ಅದನ್ನು ಬೆಳೆಸಲು ಸಹಾಯ ಮಾಡಬೇಕಾತ್ತದೆ. ಇದಕ್ಕೆ ಪೋಷಕರಿಗೆ ಬೇಕಾಗಿರುವುದು ವಿಶೇಷ ಪರಿಣಿತಿಯಲ್ಲ, ಕಾಳಜಿ ಮತ್ತು ತಾಳ್ಮೆ ಮಾತ್ರ. ಮಕ್ಕಳನ್ನು ಟೀವಿ, ಕಂಪ್ಯೂಟರ್, ಮೊಬೈಲ್‍ಗಳಿಂದ ವಿಮುಖರನ್ನಾಗಿಸಿ ಸುಮ್ಮನೆ ಸಮಯ ಕಳೆಯಲು ಹೇಳಿ. ನಾವಂದುಕೊಳ್ಳುವಂತೆ ಅವರು ಸೋಮಾರಿಗಳಾಗಿ ಕೂರುವುದಿಲ್ಲ. ತಮ್ಮ ಕ್ರಿಯಾಶೀಲತೆಯನ್ನು ಯಾವುದಾದರೂ ದಿಕ್ಕಿನಲ್ಲಿ ಹರಿಸಿಯೇ ಹರಿಸುತ್ತಾರೆ. ಅದು ಅವರ ನಿಜವಾದ ಆಸಕ್ತಿಯ ಕ್ಷೇತ್ರವಾಗಿರುತ್ತದೆ.
ಹಾಗೊಮ್ಮೆ ಮಕ್ಕಳು ಎರಡು ಮೂರು ಕ್ಷೇತ್ರಗಳಲ್ಲಿ ಅಭಿರುಚಿಯನ್ನು ತೋರಿಸಿದರೆ ಎಲ್ಲಾ ಕ್ಷೇತ್ರಗಳ ಬಗೆಗೆ ಹೆಚ್ಚಿನ ಮಾಹಿತಿ ಒದಗಿಸುತ್ತಾ ಬಂದರೆ ನಿಧಾನವಾಗಿ ಅವರ ಯೋಚನೆಗಳು ಹರಳುಗಟ್ಟುತ್ತವೆ. ಯಾವುದೇ ಹಂತದಲ್ಲಿಯೂ ಮಕ್ಕಳ ಅಭಿರುಚಿಗಳನ್ನು ಕೀಳುಗೈದು, “ಇದರಲ್ಲಿ ಸಂಬಳ ಕಡಿಮೆ; ಅದಕ್ಕೆ ಸ್ಕೋಪ್ ಜಾಸ್ತಿ” ಎಂದು ತಮ್ಮ ಯೋಚನೆಗಳನ್ನು ಹೇರಲು ಯತ್ನಿಸಿದರೆ ಅವರಿಗೆ ಗೊಂದಲಗಳಾಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು. ಆರಿಸಿಕೊಂಡ ಕ್ಷೇತ್ರದಲ್ಲಿ ಒಂದು ದೀರ್ಘಕಾಲೀನ ಯೋಜನೆ ಇಟ್ಟುಕೊಂಡು ಪರಿಶ್ರಮಪಡುವುದರ ಅಭ್ಯಾಸ ಮಾಡಿಸಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿರುತ್ತವೆ.
ವಸಂತ್ ನಡಹಳ್ಳಿ