ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಯು ಸಾರ್ವಜನಿಕ ಯಾವುದೆ ಕೆಲಸ ಕಾರ್ಯವನ್ನು ಸಕಾಲಕ್ಕೆ ಮಾಡಿಕೊಡದೆ ಉದ್ದೇಶಪೂರ್ವಕವಾಗಿ ವಿಳಂಬ, ಲಂಚಕ್ಕಾಗಿ ಪೀಡಿಸಿದಲ್ಲಿ ಅಂತಹವರ ವಿರುದ್ಧ ನಮಗೆ ನೀವು ದೂರು ನೀಡಬಹುದು ಎಂದು ಲೋಕಾಯುಕ್ತ ಡಿವೈಎಸ್ಪಿ ಮೋಹನ್ ಹೆಡ್ಡಣ್ಣನವರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಲಂಚ ಕೊಡುವುದು ಎಷ್ಟು ತಪ್ಪೋ ತೆಗೆದುಕೊಳ್ಳುವುದು ಅಷ್ಟೆ ತಪ್ಪು. ಅಧಿಕಾರಿಗಳು ಲಂಚ ಕೇಳಿ ವಿನಾಕಾರಣ ಕೆಲಸ ಕಾರ್ಯಗಳನ್ನು ವಿಳಂಬ ಮಾಡಿದರೆ ಲೋಕಾಯುಕ್ತ ಕಚೇರಿಗೆ ಬಂದು ನೀವು ದೂರು ಕೊಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು, ದೂರು ನೀಡುವವರು ಲಿಖಿತವಾಗಿ ಅರ್ಜಿ ಕೊಡಬೇಕು, ನಿರ್ಧಿಷ್ಟವಾದ ಪ್ರಕರಣದ ಬಗ್ಗೆ ದೂರು ನೀಡಿ ನಿಮ್ಮ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕು ಎಂದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕವಾಗಿ ಹಾಕಿರುವ ದಿಬ್ಬ (ಹಂಪ್) ಗಳಿಂದ ನಾಗರಿಕರು ಸೇರಿದಂತೆ ಅಂಗವಿಕಲರಿಗೆ ಓಡಾಡಲು, ಬಸ್ ಹತ್ತಲು ಸಮಸ್ಯೆಯಾಗುತ್ತಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಗವಿಕಲರಿಗಾಗಿ ವ್ಹೀಲ್ ಚೇರ್, ಶೌಚಾಲಯ ವ್ಯವಸ್ಥೆಯಿಲ್ಲ. ಅಂಗವಿಕಲರಿಗೆ ಬರುವ ಮಾಸಿಕ ವೇತನ ಪಡೆಯಬೇಕಾದರೆ ಬ್ಯಾಂಕ್ಗಳಿಗೆ ಹೋಗಬೇಕಾಗಿದ್ದು ಬ್ಯಾಂಕ್ ಗಳಲ್ಲಿ ಅಂಗವಿಕಲರಿಗಾಗಿ ಇಳಿಜಾರು (ರ್ಯಾಂಪ್) ವ್ಯವಸ್ಥೆಯಿಲ್ಲ ಎಂಬ ದೂರುಗಳು ಬಂದಿದ್ದ ಸಂಬಂದಪಟ್ಟವರಿಗೆ ಪತ್ರ ಮುಖೇನ ಕ್ರಮ ಜರುಗಿಸಲು ಆದೇಶಿಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ೪ ಅರ್ಜಿಗಳು ಸಲ್ಲಿಕೆ ಆದವು.
ಲೋಕಾಯುಕ್ತ ಇನ್ಸ್ಪೆಕ್ಟರ್ ಹರೀಶ್, ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮೇಲ್ವಿಚಾರಕ ಪ್ರಸಾದ್, ನಗರಸಭೆ ಪೌರಾಯುಕ್ತ ಚಲಪತಿ ಹಾಜರಿದ್ದರು.
