ಶಿಡ್ಲಘಟ್ಟದ ಬೆಸ್ಕಾಂ ಕಚೇರಿ ಬಳಿ ಇರುವ “ಮೂರು ದಾರಿ” (ಮೂರು ರಸ್ತೆಗಳು ಒಂದು ಗೂಡುವ ಸ್ಥಳ) ದಲ್ಲಿ ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಕಚ್ಚಾ ರೇಷ್ಮೆ ವ್ಯಾಪಾರವನ್ನು ನಗರದ ಬಸ್ ನಿಲ್ದಾಣಕ್ಕೆ ಶುಕ್ರವಾರ ಸ್ಥಳಾಂತರಗೊಳಿಸಿದ್ದು, ಅಲ್ಲಿ ಶುಕ್ರವಾರ ಕಚ್ಚಾ ರೇಷ್ಮೆ ವ್ಯಾಪಾರ ನಡೆಯಿತು.
ಅಂತರವನ್ನು ಕಾಯ್ದುಕೊಳ್ಳಲು ತಾಲ್ಲೂಕು ಆಡಳಿತ ನೆಲದ ಮೇಲೆ ಗುರುತುಗಳನ್ನು ಹಾಕಿದ್ದರೂ ಕಚ್ಚಾ ರೇಷ್ಮೆ ಕೊಳ್ಳುವವರು ಮತ್ತು ಮಾರುವವರು ಅಂತರವನ್ನು ಕಾಯ್ದುಕೊಳ್ಳದೆ ಗುಂಪುಗೂಡಿ ವ್ಯಾಪಾರ ನಡೆಸಿದ್ದರು.
ಸಣ್ಣ ಪ್ರಮಾಣದಲ್ಲಿ ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡುವವರು ಕಚ್ಚಾ ರೇಷ್ಮೆ ವ್ಯಾಪಾರವನ್ನು ಇಲ್ಲಿ ಮಾಡುತ್ತಿದ್ದರು. ಅಂತರ ಕಾಯ್ದುಕೊಳ್ಳದೆ ನಡೆಸುತ್ತಿದ್ದ ಈ ವ್ಯಾಪಾರದಿಂದ ಜನರು ಆತಂಕಗೊಂಡಿದ್ದರು. ಅದಕ್ಕಾಗಿ ತಾಲ್ಲೂಕು ಆಡಳಿತ ವಿವಿದೆಡೆ ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ಈಗ ಸಾರಿಗೆ ಸಂಚಾರವಿಲ್ಲದಿರುವುದರಿಂದ ನಗರದ ಬಸ್ ನಿಲ್ದಾಣವನ್ನು ಈ ವ್ಯಾಪಾರಕ್ಕೆ ಸೂಕ್ತ ಸ್ಥಳವೆಂದು ನಿರ್ಧರಿಸಿದೆ.
“ಮೂರು ದಾರಿಯಲ್ಲಿ ರೇಷ್ಮೆ ವಹಿವಾಟು ನಡೆಸುವಾಗ ಅಲ್ಲಿ ಸ್ಥಳ ಕಡಿಮೆಯಿರುವುದರಿಂದ ಅಂತರವನ್ನು ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಈ ಕಾರಣದಿಂದ ತಾಲ್ಲೂಕು ಆಡಳಿತದವರು ನಗರದ ಬಸ್ ನಿಲ್ದಾಣದಲ್ಲಿ ವಿಶಾಲವಾದ ಜಾಗ ಇದೆಯೆಂದು ಇಲ್ಲಿ ವ್ಯಾಪಾರ ನಡೆಸುವಂತೆ ಸೂಚಿಸಿದ್ದಾರೆ. ಇವತ್ತಷ್ಟೇ ಇಲ್ಲಿ ವ್ಯಾಪಾರ ವಹಿವಾಟು ಪ್ರಾರಂಭವಾಗಿರುವುದರಿಂದ ಜನರು ಗುಂಪುಗೂಡುತ್ತಿದ್ದಾರೆ. ನಾವುಗಳು ತಿಳಿಹೇಳುತ್ತಿದ್ದೇವೆ. ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ” ಎಂದು ರೀಲರ್ ಸಂಘದ ಅಧ್ಯಕ್ಷ ಅನ್ಸರ್ ಖಾನ್ ತಿಳಿಸಿದರು.