ನಗರದ ತಾಲ್ಲೂಕು ಕಚೇರಿ ಮುಂಭಾಗ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಿ.ನರಸಿಂಹಮೂರ್ತಿ ಮಾತನಾಡಿದರು.
ನಗರದ ಹೃದಯ ಭಾಗದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಭವನ ನಿರ್ಮಿಸಲು ನಿವೇಶನ ಗುರುತಿಸಿ, ತ್ವರಿತವಾಗಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಹಿಂದೆ ಹಲವಾರು ಬಾರಿ ದಲಿತ ಕುಂದು ಕೊರತೆ ಸಭೆ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತಾ ಬಂದಿದ್ದೇವಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣೊರೆಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸಂವಿದಾನ ಶಿಲ್ಪಿ ಅಂಬೇಡ್ಕರ್‌ರ ಭವನ ನಿರ್ಮಿಸಲು ನಗರದಲ್ಲಿರುವ ಸರ್ಕಾರಿ ಸ್ಥಳ ಬಿಟ್ಟು ಹೊರವಲಯದ ವರದನಾಯಕನಹಳ್ಳಿ ಬಳಿ ಗುರುತಿಸಲು ಮುಂದಾಗಿದ್ದಾರೆ. ಅಲ್ಲಿ ಭವನ ನಿರ್ಮಿಸಿದ್ದೇ ಆದಲ್ಲಿ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಬದಲಿಗೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿರುವ ತೋಟಗಾರಿಕೆ ಇಲಾಖೆ ಆವರಣ ಅಥವ ಕಂದಾಯ ಭವನದ ಹಿಂಭಾಗದ ಹಳೆ ಪೊಲೀಸ್ ಕ್ವಾಟ್ರಸ್, ಅಥವಾ ಸ್ಥಳವಾದ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಾಳು ಬಿದ್ದಿರುವ ವಸತಿ ಗೃಹಗಳ ನಿವೇಶನವನ್ನು ಮಂಜೂರು ಮಾಡಿದಲ್ಲಿ ಅಂಬೇಡ್ಕರ್ ಭವನ ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಕೂಡಲೇ ಮೇಲಿನ ಮೂರು ಸ್ಥಳಗಳಲ್ಲಿ ಯಾವುದಾದರೂ ಒಂದು ಸ್ಥಳ ಮಂಜೂರು ಮಾಡಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ತಾವು ಸೂಚಿಸಿರುವ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ಎಸ್.ಎಂ.ರಮೇಶ್, ಕಾರ್ಯದರ್ಶಿಗಳಾದ ಕೆ.ಎಸ್.ಅರುಣ್‌ಕುಮಾರ್, ಈಧರೆ ಪ್ರಕಾಶ್, ಮುಖಂಡರಾದ ಸಿ.ಎಂ.ಮುನಯ್ಯ, ಮುನಿನರಸಿಂಹ, ಶ್ರೀರಾಮಣ್ಣ, ನಾಗನರಸಿಂಹ, ಮಳ್ಳೂರು ಅಶೋಕ್, ಭಕ್ತರಹಳ್ಳಿ ಪ್ರತೀಶ್ ಹಾಜರಿದ್ದರು.