Home News ಅಧಿಕಾರಿಗಳ ಗೈರು – ನಿಂತುಹೋದ ರೈತರ ಗ್ರಾಮ ಸಭೆ

ಅಧಿಕಾರಿಗಳ ಗೈರು – ನಿಂತುಹೋದ ರೈತರ ಗ್ರಾಮ ಸಭೆ

0

ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಎಲ್‌.ಜಮುನಾ ಧರ್ಮೇಂದ್ರ ಅವರ ಅಧ್ಯಕ್ಷತೆಯಲ್ಲಿ ರೈತರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ, ಸರ್ಕಾರಿ ಯೋಜನೆಗಳ ಕುರಿತಂತೆ ಮಾಹಿತಿಯನ್ನು ತಿಳಿಸುವುದಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯ ಅಭಾವ ಉಂಟಾಗಿರುವುದರಿಂದ ರೈತರು, ಸಾರ್ವಜನಿಕರು ಕೆಲಸ ಅರಸಿ ಬೇರೆಡೆಗೆ ವಲಸೆ ಹೋಗದಂತೆ ತಡೆಯುವ ಬಗ್ಗೆ ಚರ್ಚಿಸುವುದಿತ್ತು. ಆದರೆ ಯಾವುದೇ ಇಲಾಖೆಯ ಅಧಿಕಾರಿಯೂ ಸಹ ಬರದೇ ಹೋದದ್ದರಿಂದ ಮೇಲೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ನಡೆಯಬೇಕಿದ್ದ ರೈತರ ಗ್ರಾಮ ಸಭೆ ನಡೆಯಲಿಲ್ಲ.
ಅಧಿಕಾರಿಗಳಿಗೆ ಕಾಯುತ್ತಾಕುಳಿತಿದ್ದ ಪಂಚಾಯಿತಿ ವ್ಯಾಪ್ತಿಯ ರೈತರು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಹಿಂದಿರುಗಿದರು.
ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರೂ, ಪಂಚಾಯಿತಿ ವ್ಯಾಪ್ತಿಯ ರೈತರು ಹಾಜರಿದ್ದ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ರೈತರು ಖಂಡಿಸಿದರು. “ರೈತರ ಬಗ್ಗೆ ಅಷ್ಟೊಂದು ತಾತ್ಸಾರ ಧೋರಣೆ ತಳೆದರೆ ಹೇಗೆ? ರೇಷ್ಮೆಯನ್ನೇ ನಂಬಿರುವ ರೈತರಿದ್ದೇವೆ. ನಮ್ಮ ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿ ರೇಷ್ಮೆ ಫಾರಂ ಇದೆ. ಆದರೂ ಅಧಿಕಾರಿಗಳಿಗೆ ನಮ್ಮ ಗ್ರಾಮ ದೂರವಾಯಿತೇ. ಬರ ಪೀಡಿತರಾಗಿ ರೈತರು ಸಂಕಷ್ಟದಲ್ಲಿದ್ದರೂ ಅಗತ್ಯ ಮಾಹಿತಿ ನೀಡುವ ಸೌಜನ್ಯವೂ ಇಲ್ಲವೇ” ಎಂದು ದೂರಿದರು.
ರೈತರಾದ ಶ್ರೀನಿವಾಸರೆಡ್ಡಿ, ಗೋಪಾಲ್‌, ಪ್ರಭಾಕರ್‌, ಆನಂದ್‌, ರೂಪೇಶ್‌, ಶ್ರೀಧರ್‌, ಅಂಬರೀಷ್‌, ಶಿವಕುಮಾರ್‌, ಮಾರೇಗೌಡ, ಆರ್‌.ಎ.ಉಮೇಶ್‌ ಹಾಜರಿದ್ದರು.

error: Content is protected !!