ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಾವಿತ್ರಿ ಬಾಪುಲೆ ಅವರ ೧೮೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಮೌಢ್ಯತೆಗಳೇ ವಿಜೃಂಭಿಸುತ್ತಿದ್ದ ಪರಿಸ್ಥಿತಿಯಲ್ಲಿ ಶೋಷಿತ, ದಲಿತ, ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿಯಾಡಿದವರು ಮಹಾನ್ ತಾಯಿ ಸಾವಿತ್ರಿ ಬಾಪುಲೆ ಹಾಗೂ ಜ್ಯೋತಿಬಾಪುಲೆಯವರು ಎಂದು ಅವರು ತಿಳಿಸಿದರು.
ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾರೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ, -ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಬೆಳಗಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಎದುರಿಸುತ್ತಾರೆ ಎಂದು ಅವರ ಜೀವನ ಕಥೆಯನ್ನು ಮಕ್ಕಳಿಗೆ ವಿವರಿಸಿದರು.
ಶಿಕ್ಷಕ ಚಾಂದ್ ಪಾಷ ಮಾತನಾಡಿ, ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು. ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, ವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು ಎಂದು ಹೇಳಿದರು.
ಶಿಕ್ಷಕರಾದ ಅಶೋಕ್, ಭಾರತಿ ಹಾಜರಿದ್ದರು.