ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯವಾದ ಮಾರ್ಗವಾಗಿದೆ. ಗ್ರಾಮಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಬಯಲುಬಹಿರ್ದೆಸೆಮುಕ್ತ ಗ್ರಾಮವಾಗಿಯೇ ಉಳಿಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯಿತಿ, ಜೆ.ವೆಂಕಟಾಪುರ ಗ್ರಾಮಪಂಚಾಯಿತಿ, ಸುಗಟೂರು ಕೆಂಪೇಗೌಡ ಯುವಕರ ಬಳಗದ ಆಶ್ರಯದಲ್ಲಿ ಶುಕ್ರವಾರ ಸ್ವಚ್ಚಭಾರತ್ಮಿಶನ್ ಅಡಿಯಲ್ಲಿ ಬಯಲು ಬಹಿದೆಸೆಮುಕ್ತ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯದ ಸುಸ್ಥಿರತೆ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿನೇ ದಿನೇ ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿಯ ವೈಪರಿತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ದ ಜನರು, ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ.
ಆಮ್ಲಜನಕ, ನೀರನ್ನು ಕೊಂಡು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಗಂಭೀರವಾದ ಯೋಜನೆಗಳನ್ನು ಕಡ್ಡಾಯಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿ, ಮಕ್ಕಳದಿಸೆಯಿಂದಲೇ ಪರಿಸರ ಹಾಗೂ ನೀರಿನ ಮಹತ್ವದ ಜಾಗೃತಿ ಮೂಡಬೇಕು. ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದರು.
ಕೆಂಪೇಗೌಡ ಯುವಕ ಬಳಗದ ನಿರ್ದೇಶಕ ಎಸ್.ಎನ್.ಮಂಜುನಾಥ್ ಮಾತನಾಡಿ, ಹಸಿರು ಪರಿಸರದ ಉಳಿವಿನ ಬಗ್ಗೆ ಜಾಗೃತರಾಗಬೇಕು. ಮನುಷ್ಯ ಜಾಗೃತವಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಗಿಡಮರಗಳ ಕ್ರಾಂತಿಯಾಗಬೇಕಿದೆ. ಕೇವಲ ಪರಿಸರ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ನಿರಂತರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಶಿಕ್ಷಕ ಎ.ಬಿ.ನಾಗರಾಜು, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ ಅವರು ಮಾತನಾಡಿದರು. ಆಂದೋಲನದ ಅಂಗವಾಗಿ ಶಾಲಾಮಕ್ಕಳಿಗೆ ವೈಯಕ್ತಿಕ ಸ್ವಚ್ಚತೆ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಗ್ರಾಮದ ಪ್ರಮುಖಬೀದಿಗಳಲ್ಲಿ ಶಾಲಾಮಕ್ಕಳ ಪ್ರಭಾತ್ಭೇರಿಯೊಂದಿಗೆ ಘೋಷಣೆಗಳೊಂದಿಗೆ ಗ್ರಾಮನೈರ್ಮಲ್ಯ ಕುರಿತ ಜಾಗೃತಿ ಜಾಥಾ ನಡೆಯಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಎನ್.ಪಿ.ನಾಗರಾಜಪ್ಪ, ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯೆ ಭಾಗ್ಯಮ್ಮಅರುಣ್ಕುಮಾರ್, ಕೆಂಪೇಗೌಡ ಯುವಕ ಬಳಗದ ಮೋಹನ್ರಜು, ನಾಗರಾಜು, ನಿತಿನ್ಕುಮಾರ್, ಲಕ್ಷ್ಮಿಪತಿ, ನಂದನ್ಕುಮಾರ್, ಶಶಿಕುಮಾರ್, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ, ಗ್ರಾಮಪಂಚಾಯಿತಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಹಾಜರಿದ್ದರು.