Home News ಅಸಮಾನತೆಯ ವಿರುದ್ಧ ಸಮರ ಸಾರಿದವರು ಬಸವೇಶ್ವರರು

ಅಸಮಾನತೆಯ ವಿರುದ್ಧ ಸಮರ ಸಾರಿದವರು ಬಸವೇಶ್ವರರು

0

ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮಿ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಸಂಜೆ ಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ನಡೆದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿ ಅವರು ಮಾತನಾಡಿದರು.
ನಾವಾಡುವ ಸರಳ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ, ನಿರ್ದಯಿ ಹೃದಯದವರೂ ತಮ್ಮನ್ನೊಮ್ಮೆ ಪರಿಶೀಲಿಸಿಕೊಳ್ಳುವಂತೆ, ತಮ್ಮ ವಚನಗಳ ಮೂಲಕ ಜನರ ಮನಃಪರಿವರ್ತನೆ ಮಾಡಿದ ಮಹಾನ್ ಮಾನವತಾವಾದಿ, ವಿಶ್ವಮಾನವ ಜಗಜ್ಯೋತಿ ಬಸವೇಶ್ವರರು ಪ್ರಪಂಚಕ್ಕೆ ಆದರ್ಶಪ್ರಾಯರಾಗಿದ್ದಾರೆ. ಕಾಯಕಕ್ಕೆ ದೈವಿಕತ್ವ ನೀಡಿದ ಬಸವೇಶ್ವರರು ‘ಕಾಯಕವೇ ಕೈಲಾಸ’ ಎಂದರು. ಬಸವಣ್ಣನವರ ಕಾಯಕ ತತ್ವವು ದಾಸೋಹ ಕಲ್ಪನೆಯನ್ನು ಹೊಂದಿದ್ದು ತ್ಯಾಗ, ದಾನ, ಸಮಾನ ಹಂಚಿಕೆ, ಅಹಂಕಾರ ತ್ಯಜಿಸುವುದು, ಶರಣಾಗತಿಯಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದೆ.
ಬಸವಣ್ಣನವರ ಪ್ರಕಾರ ಕಾಯಕ ಮಾಡುವುದು ಒಂದು ನೈತಿಕ ಬದ್ಧತೆ, ಪ್ರತಿಯೊಬ್ಬರೂ ತನ್ನ ಅನ್ನವನ್ನು ದುಡಿದು ತಿನ್ನಬೇಕು. ‘ರಟ್ಟೆ ಮುರಿದು ದುಡಿದು ತಿನ್ನುವಂತಹ ರೊಟ್ಟಿಯು ಅಮೃತಕ್ಕಿಂತ ಶ್ರೇಷ್ಠವಾದದ್ದು’. ಕಾಯಕ ತತ್ವದ ಮೂಲಕ ಬಸವೇಶ್ವರರು ಪ್ರತಿಯೊಬ್ಬರಿಗೂ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಬದುಕಲು ಕರೆ ನೀಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಮೂರು ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು. ಜಾನಪದ ಕಲಾವಿದ ಗಾ.ನ.ಅಶ್ವತ್ಥ್ ತಂಡದವರಿಂದ ವಚನಗಾಯನವನ್ನು ಆಯೋಜಿಸಲಾಗಿತ್ತು.
ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್, ವಚನ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುರುಷೋತ್ತಮ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.