ಆರ್ಥಿಕ ಸಮಾನತೆ ಸಾಧಿಸುವವರೆಗೂ ಸಮಾಜಿಕ ಸುಧಾರಣೆಯನ್ನು ಕಾಣಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ಸಹಕಾರ ಚುನಾವಣಾ ಆಯುಕ್ತ ಎನ್.ಸಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಬಾಬು ಜಗಜೀವನ್ರಾಂ ನೇಕಾರರ ಸಹಕಾರ ಸಂಘ ಹಾಗೂ ತಾಲ್ಲೂಕು ಕಸಾಪ ವತಿಯಿಂದ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಹಾಗೂ ಟೈಲರಿಂಗ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮನೆಯು ಬೆಳಗಲು ಮತ್ತು ಮುನ್ನಡೆಯಲು ಮಹಿಳೆಯ ಪಾತ್ರ ಬಹಳ ಮುಖ್ಯ. ಸ್ವಾಭಿಮಾನದ ಹಾಗೂ ಆತ್ಮಾಭಿಮಾನದ ದುಡಿಮೆಯ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಅಂಬೇಡ್ಕರ್ ಅವರ ಆಶಯವೂ ಅದೇ ಆಗಿತ್ತು. ಸಮಾಜದಲ್ಲಿ ಮಹಿಳೆಯ ಧ್ವನಿಗೆ ಬಲ ಬರುವಂತೆ ಅವರು ಕೆಲಸ ಮಾಡಿದ್ದು ಸ್ಮರಣಾರ್ಹ. ಶ್ರಮ ಪಡದೆ, ಸಾಮಾಜಿಕ ಬದ್ಧತೆಯಿಲ್ಲದೆ ಸಹಕಾರ ಸಂಘಗಳು ಅಭಿವೃದ್ಧಿ ಆಗುವುದಿಲ್ಲ. ಕಷ್ಟಪಟ್ಟು ಸಾಧನೆ ಮಾಡುವವರು ಮಾತ್ರ ಸಾಧಕರಾಗುತ್ತಾರೆ. ನಾಗಮಂಗಲ ಗ್ರಾಮದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿ, ಐಎಫ್ಎಸ್ ಹಾಗೂ ಐಎಎಸ್ ಮಾಡಲು ನನಗೆ ಪ್ರೇರಣೆಯಾದದ್ದು ಅಂಬೇಡ್ಕರ್ ಅವರಂಥಹ ಸಾಧಕರು ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಸಾಧನೆ, ಓದಿನ ಹಸಿವು, ಸಂವಿಧಾನ ರಚನೆ, ಶ್ರಮದ ಬದುಕು ಮುಂತಾದವುಗಳನ್ನು ವಿವರಿಸಿದರು. ದೇವರು ತನ್ನ ಪ್ರತಿನಿಧಿಯಂತೆ ಈ ರೀತಿಯ ಮಹಾಪುರುಷರನ್ನು ಭೂಮಿಯಲ್ಲಿ ಅವತರಿಸುವಂತೆ ಮಾಡುತ್ತಾನೆ. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ನಡೆಸುತ್ತಿರುವ ವಿಭಿನ್ನ, ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ತಾಲ್ಲೂಕು ಕಸಾಪ ವತಿಯಿಂದ ನಾಗಮಂಗಲ ಗ್ರಾಮದ ಹಾಡುಗಾರಿಕೆ, ತಬಲ, ನಾಟಕ ಮೊದಲಾದ ಕಲಾವಿದರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ರಾಜ್ಯ ಸರ್ಕಾರದ ಸಹಕಾರ ಚುನಾವಣಾ ಆಯುಕ್ತ ಎನ್.ಸಿ.ಮುನಿಯಪ್ಪ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಎನ್.ಆರ್.ವೆಂಕಟೇಶ, ಶ್ರೀನಿವಾಸ, ರತ್ನಪ್ಪ, ವೆಂಕಟಕೃಷ್ಣಯ್ಯಶೆಟ್ಟಿ, ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಜಂಗಮಕೋಟೆ ಹೋಬಳಿ ಉಪಾಧ್ಯಕ್ಷ ಜಗದೀಶ್ಬಾಬು, ಸದಸ್ಯರಾದ ಗುರುನಂಜಪ್ಪ, ಮುನಿರಾಜು(ಕುಟ್ಟಿ) ಹಾಜರಿದ್ದರು.