ರೈತರಿಂದ ಸ್ಯಾಂಪಲ್ ಪಡೆದುಕೊಂಡ ಎರಡು ಮೂರು ದಿನಗಳಲ್ಲಿ ರಾಗಿಯನ್ನು ಖರೀದಿ ಮಾಡಿ, ಹಣವನ್ನು ಆರ್.ಟಿ.ಜಿ.ಎಸ್.ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮಿಗೆ ಬುಧವಾರ ಬೇಟಿ ನೀಡಿ ಆಹಾರಧಾನ್ಯಗಳ ಗುಣಮಟ್ಟವನ್ನು ಪರಿಶೀಲನೆ ಮಾಡಿದ ನಂತರ ಅವರು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದರು.
ನಿಗದಿತ ಸಮಯದಲ್ಲಿ ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರಿಗೆ ವಿತರಣೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಬೇಟಿ ನೀಡಿ, ವಿತರಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಬೇಕು. ನಾಗರಿಕರಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು, ರೈತರಿಂದ ರಾಗಿಯನ್ನು ಸ್ಯಾಂಪಲ್ ಪಡೆದುಕೊಂಡ ಎರಡು ಮೂರು ದಿನಗಳಲ್ಲಿ ರಾಗಿಯನ್ನು ಖರೀದಿ ಮಾಡಬೇಕು. ರೈತರು ತರುವ ಮೂಟೆಗಳನ್ನು ಇಳಿಸಲು ಮೂಟೆಗೆ ೫ ರೂಪಾಯಿಗಳು ಮಾತ್ರ ತೆಗೆದುಕೊಳ್ಳಬೇಕು. ಒಂದು ಮೂಟೆಗೆ ಕೇವಲ ೨ ಕೆ.ಜಿ.ರಾಗಿ ಮಾತ್ರ ಪಡೆದುಕೊಳ್ಳಬೇಕು. ೪ ಕೆ.ಜಿ.ಪಡೆದುಕೊಳ್ಳುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಸ್ಥಳದಲ್ಲೆ ಹಾಜರಿದ್ದ ಕಾರ್ಮಿಕರು, ಗೋದಾಮುಗಳು ದೊಡ್ಡದಾಗಿರುವುದರಿಂದ ೫ ರೂಪಾಯಿ ಪಡೆದುಕೊಂಡು ಮೂಟೆಗಳನ್ನು ಇಳಿಸುವುದು ಕಷ್ಟಕರವಾಗಿದೆ, ಆದ್ದರಿಂದ ೧೦ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇಲಾಖೆಯಿಂದ ನಮಗೆ ಸಂಭಾವನೆ ಕೊಡದೇ ಇರುವ ಕಾರಣ, ಒಂದು ಮೂಟೆಗೆ ೪ ಕೆ.ಜೆ.ರಾಗಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಕಾರ್ಮಿಕರು ಜಿಲ್ಲಾಧಿಕಾರಿಗೆ ತಿಳಿಸಿದರು.
ಕಾರ್ಮಿಕರು ಹಾಗೂ ರೈತರೊಂದಿಗೆ ಚರ್ಚೆ ಮಾಡಿ, ಯಾರಿಗೂ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸದ ನಂತರ ಚಿಂತಾಮಣಿ ರಸ್ತೆಯಲ್ಲಿನ ರಾಗಿ ಗೋದಾಮಿಗೆ ಬೇಟಿ ನೀಡಿದರು. ಸ್ವಚ್ಚತೆಯಿಲ್ಲದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿರುವ ಏಜೆನ್ಸಿಯವರು, ದುಬಾರಿ ಹಣವನ್ನು ತೆಗೆದುಕೊಂಡು ಹೊಸ ಸಂಪರ್ಕಗಳನ್ನು ನೀಡುತ್ತಿದ್ದಾರೆ. ಕೂಡಲೇ ಸರಿಪಡಿಸುವಂತೆ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀನಿವಾಸಯ್ಯ, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಕೃಷಿ ಇಲಾಖೆಯ ಅಧಿಕಾರಿ ಗೋಪಾಲಸ್ವಾಮಿ, ಆಹಾರ ನಿರೀಕ್ಷಕ ಪ್ರಕಾಶ್ ಮತ್ತಿತರರು ಹಾಜರಿದ್ದರು.