ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಂದೀಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಪಂಚೇಂದ್ರಿಯಗಳಲ್ಲಿ ಕಣ್ಣು ಮುಖ್ಯ ಅಂಗವಾಗಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಕಣ್ಣಿನ ತಪಾಸಣೆಯನ್ನು ಕಾಲಕಾಲಕ್ಕೆ ಎಲ್ಲರೂ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ದೃಷ್ಠಿದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ಸೋರುವಿಕೆ, ಅಭ್ಯಾಸದ ಸಮಯದಲ್ಲಿ ದೃಷ್ಟಿ ಮಂದವಾಗುವುದು, ಮುಂತಾದ ಸಮಸ್ಯೆಗಳ ನಿವಾರಣೆಗಾಗಿ ಆಗಾಗ ಕಣ್ಣಿನ ತಪಾಸಣೆಗೆ ಒಳಪಟ್ಟಾಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಣ್ಣಿನ ಪೊರೆ ಚಿಕಿತ್ಸೆ ಘಟಕ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿದ್ದು ಮುಂಬರುವ ದಿನಗಳಲ್ಲಿ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.
ನಂದೀಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರ ತಜ್ಞ ಡಾ.ನವನೀತ್ ಮಾತನಾಡಿ, ಬಹಳಷ್ಟು ಜನ ದೃಷ್ಟಿ ಕಡಿಮೆಯಾಗಿ, ಪೊರೆಯಿದೆ ಎಂದೂ ತಿಳಿದರೂ ಹತ್ತಾರು ವರ್ಷಗಳಗಟ್ಟಲೇ ಹಾಗೆಯೇ ಇರುತ್ತಾರೆ. ಬದಲಿಗೆ ದೃಷ್ಟಿ ಕಡಿಮೆಯಾದ ತಕ್ಷಣವೇ ತಪಾಸಣೆ ನಡೆಸಿದಲ್ಲಿ ಕಣ್ಣಿನ ಸಮಸ್ಯೆ ಸರಿಹೋಗುವ ಜೊತೆಗೆ ನಮಗೂ ಶಸ್ತ್ರಚಿಕಿತ್ಸೆ ಮಾಡಲು ಸುಲಭವಾಗುತ್ತದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಕಾಳಜಿವಹಿಸಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಅನುಷ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜ್ರಾವ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ವೆಂಕೋಬರಾವ್ ಹಾಜರಿದ್ದರು.