Home News ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಶಿಬಿರ

ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಶಿಬಿರ

0

ಮಕ್ಕಳು ಕೇವಲ ಪುಸ್ತಕ ಓದಿನಲ್ಲಿ ತಲ್ಲೀನರಾದರೆ ಸಾಲದು ಬದಲಿಗೆ ದೈಹಿಕವಾಗಿಯೂ ಸದೃಢರಾಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಹಾಗಾಗಿ ಗ್ರಾಮದಲ್ಲಿ ಉಚಿತವಾಗಿ 10 ದಿನಗಳ ಕಾಲ ನಡೆಸುವ ಬೇಸಿಗೆ ಶಿಬಿರದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಅಭಿಪ್ರಾಯಪಟ್ಟರು.
ತಾಲೂಕಿನ ತಾದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಕರಾಟೆ, ಜಿಮ್ನಾಸ್ಟಿಕ್, ಯೋಗ, ನೃತ್ಯ ಮುಂತಾದವುಗಳನ್ನು ಕಲಿಸುವ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ತಾದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಬೇಸಿಗೆ ಶಿಭಿರದಲ್ಲಿ ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು.

ಶಾಲೆಗೆ ರಜೆ ಬಂದರೆ ಮಕ್ಕಳು ವಿವಿಧ ಆಟೋಟಗಳು ಸೇರಿದಂತೆ ಬಾವಿಗಳಲ್ಲಿ ಈಜುವುದು, ಮರ ಹತ್ತುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಿಂದ ದೈಹಿಕವಾಗಿ ಗಟ್ಟಿಯಾಗಿದ್ದರು. ಆದರೆ ಇದೀಗ ಕೇವಲ ಟಿವಿ, ಮೊಬೈಲು, ಟ್ಯಾಬ್‍ಗಳ ಮುಂದೆ ಕುಳಿತುಕೊಂಡು ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಬೇಕು. ಮಕ್ಕಳನ್ನು ದೈಹಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಶಿಕ್ಷಕ ವಿ.ಅರುಣ್‍ಕುಮಾರ್ ಮಾತನಾಡಿ, ಪ್ರತಿ ದಿನ ಬೆಳಿಗ್ಗೆ 09 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ಶಿಬಿರವನ್ನು ನಡೆಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಕಲಿತದ್ದನ್ನು ಪ್ರದರ್ಶಿಸುವರು ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಹಂಸಪ್ರಭಾಕರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಆಶಾ ಕಾರ್ಯಕರ್ತೆ ಚಂದ್ರಕಲಾ, ಗ್ರಾಮಸ್ಥರಾದ ಅಂಬಿಕಾ, ಲತಾ ಮತ್ತಿತರರು ಹಾಜರಿದ್ದರು.

error: Content is protected !!