Home News ಎಂಟು ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಜಾಮೀನು ಗುರುತಿಸಿದ ತಾಲ್ಲೂಕು ಆಡಳಿತ

ಎಂಟು ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಜಾಮೀನು ಗುರುತಿಸಿದ ತಾಲ್ಲೂಕು ಆಡಳಿತ

0

ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ವೆ ನಂ ೧೦ ರಲ್ಲಿ ಸುಮಾರು ಎಂಟು ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಜಮೀನನ್ನು ಮಂಜೂರು ಮಾಡಲಾಗಿದೆ. ಶುಕ್ರವಾರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳಿಗೆ ಸ್ಥಳವನ್ನು ಗುರುತಿಸುವ ಕಾರ್ಯ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ತಾಲ್ಲೂಕು ಬಾಲ ಭವನ, ಉಗ್ರಾಣ ನಿರ್ಮಾಣಕ್ಕಾಗಿ ೧ ಎಕರೆ, ಸರ್ಕಾರಿ ಮೌಲಾನಾ ಆಜಾದ್ ಇಂಗ್ಲಿಷ್ ಮಾದರಿ ಶಾಲಾ ಕಟ್ಟಡ ಮತ್ತು ಆಟದ ಮೈದಾನಕ್ಕಾಗಿ ೧ ಎಕರೆ, ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ೪ ಎಕರೆ, ಅಬಕಾರಿ ನಿರೀಕ್ಷಕರ ಕಟ್ಟಡಕ್ಕಾಗಿ ೧೦ ಗುಂಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿ ಕಟ್ಟಡಕ್ಕಾಗಿ ಮತ್ತು ದೇವರಾಜ ಅರಸು ಭವನ ನಿರ್ಮಾಣಕ್ಕಾಗಿ ೧೦ ಗುಂಟೆ, ಉಪನೋಂದಣಾಧಿಕಾರಿಗಳ ಕಚೇರಿ ನಿರ್ಮಾಣಕ್ಕಾಗಿ ೨೫ ಗುಂಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ೨೦ ಗುಂಟೆ, ಕೃಷಿ ಇಲಾಖೆ ಕಚೇರಿ ಕಟ್ಟಡ ಹಾಗೂ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ೨೦ ಗುಂಟೆ ಸೇರಿದಂತೆ ಒಟ್ಟಾರೆ ೮ ಎಕರೆ ೫ ಗುಂಟೆ ಜಮೀನನ್ನು ಗುರುತಿಸಲಾಯಿತು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ವೆ ನಂ ೧೦ ರಲ್ಲಿ ಒಟ್ಟು ವಿಸ್ತೀರ್ಣ ೩೨೫ ಎಕರೆ ಜಮೀನಿದ್ದು ಸರ್ಕಾರಿ ಗೋಮಾಳ ಎಂಬುದಾಗಿ ವರ್ಗೀಕರಣಗೊಂಡಿದೆ. ಈ ಪೈಕಿ ಆರ್.ಟಿ.ಸಿ ಕಾಲಂ ನಂ ೯ ರಲ್ಲಿ ೧೮೯.೨೫ ಎಕರೆ ಗೋಮಾಳ ಜಮೀನು ಲಭ್ಯವಿದೆ. ಆ ಪೈಕಿ ವಿವಿಧ ಇಲಾಖೆಗಳಿಗೆ ಜಮೀನನ್ನು ಗುರುತಿಸಿ ಭೂಮಾಪಕರಿಂದ ನಕ್ಷೆ ತಯಾರಿಸಲಾಗಿದೆ.
ತಹಶೀಲ್ದಾರ್ ಅಜಿತ್ ಕುಮಾರ್ ರೈ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

error: Content is protected !!