Home News ಎಚ್.ಕ್ರಾಸ್ ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ

ಎಚ್.ಕ್ರಾಸ್ ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್ ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಶುಕ್ರವಾರ ನೆರವೇರಿಸಲಾಯಿತು.
ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಬ್ರಹ್ಮರಥೋತ್ಸವಕ್ಕೆ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು.
ರಥೋತ್ಸವ ಅಂಗವಾಗಿ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಸೀತಾರಾಮಾಂಜನೇಯಸ್ವಾಮಿ ದೇವಾಲಯ, ಸಪ್ಪಲಮ್ಮ ದೇವಾಲಯ ಮತ್ತು ಶನಿಮಹಾತ್ಮಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದು ಭಕ್ತರು ಭಾಗವಹಿಸಿದ್ದರು.
ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ತಿನಿಸುಗಳ, ಆಟಿಕೆಗಳ, ಗೃಹೋಪಯೋಗಿ ವಸ್ತುಗಳ ಸಾಲು ಸಾಲು ಅಂಗಡಿಗಳಿದ್ದು, ಜನರು ಬತ್ತಾಸು, ಬುರುಗು, ಕಡ್ಲೇಬೀಜವನ್ನು ಕೊಂಡು ತಿನ್ನುತ್ತಿದ್ದುದು ಸಹಜವಾಗಿತ್ತು.
ಬರಗಾಲದ ಛಾಯೆ ರಥೋತ್ಸವದ ಮೇಲೂ ಬೀರಿದ್ದು ಕಂಡುಬಂದಿತು. ಮೇವು ಮತ್ತು ನೀರಿನ ಅಭಾವದಿಂದ ಈ ಬಾರಿ ರಾಸುಗಳನ್ನು ಕರೆತಂದಿರಲಿಲ್ಲ. ರಾಸುಗಳ ಸುಂಕಕ್ಕೆ ಪಂಚಾಯಿತಿ ವತಿಯಿಂದ ರಿಯಾಯಿತಿ ನೀಡಿದ್ದರೂ ಸಹ ರಾಸುಗಳಿಲ್ಲದೆ ರಥೋತ್ಸವ ಕಳೆಕಳೆದುಕೊಂಡಿತ್ತು. ಆದರೆ ರಾಸುಗಳಿಗೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಕೂಡ ಜಾತ್ರೆಯಲ್ಲಿ ಮಾರಾಟಕ್ಕಿಟ್ಟಿದ್ದು, ರೈತರು ಕೊಂಡುಕೊಳ್ಳಲು ಅನುಕೂಲವಾಗಿತ್ತು.

error: Content is protected !!