ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಬರುತ್ತದೆ ಎಂದು ಹೇಳಿಕೊಳ್ಳುತ್ತಿರುವ ರಾಜಕಾರಣಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಹೇಳಿದರು.
ಎತ್ತಿನಹೊಳೆ ಯೋಜನೆಯಿಂದ ೧೦ ವರ್ಷವಾದರೂ ನೀರು ಬರುವುದು ಖಚಿತವಿಲ್ಲ. ಸರ್ಕಾರ ೧೩ ಸಾವಿರ ಕೋಟಿ ಯೋಜನೆಗೆ ಮೀಸಲಿಟ್ಟು ೨ ಸಾವಿರ ಕೋಟಿಗಳನ್ನು ಈಗಾಗಲೇ ಶಾಸಕರಿಗೆ ಅನುದಾನಗಳ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.
ಪ್ರತಿಯೊಂದು ಚುನಾವಣೆಗಳ ಸಮಯದಲ್ಲಿ ಬಯಲು ಸೀಮೆ ಭಾಗಗಳಲ್ಲಿನ ಜನರಿಗೆ ನೀರಾವರಿ ಯೋಜನೆಗಳನ್ನು ೨ ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆಗಳನ್ನು ನೀಡಿ ಮತಗಳನ್ನು ಗಳಿಸಿಕೊಂಡು ಹೋದ ನಂತರ ಯೋಜನೆಯ ವಸ್ತುಸ್ಥಿತಿಯ ಬಗ್ಗೆ ರೈತರಿಗಾಗಲಿ, ಈ ಭಾಗದ ಜನತೆಗಾಗಲಿ ವಿಚಾರ ತಿಳಿಸಲ್ಲ. ಚುನಾವಣೆಗಳು ಸಮೀಪಕ್ಕೆ ಬಂದಾಗ ಸಂಸದರು ತಮ್ಮ ಸ್ವಂತ ಖರ್ಚಿನಲ್ಲೆ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರನ್ನು ಕಾಮಗಾರಿಯನ್ನು ವೀಕ್ಷಣೆ ಮಾಡಲು ಕರೆದುಕೊಂಡು ತೋರಿಸಿಕೊಂಡು ಬರುತ್ತಿದ್ದಾರೆ ಎಂದರು.
ಜಿಲ್ಲಾ ರೈತ ಸಂಘದ ಮುಖಂಡ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಅಲ್ಲಿನ ಕಾಫಿ ತೋಟಗಳು, ಗದ್ದೆಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಟ್ಟಿಲ್ಲ. ಹಾಕಿರುವ ಪೈಪ್ ಗಳು ತೂತುಗಳಾಗಿವೆ. ನೀರು ಬಂದರೂ ವ್ಯರ್ಥವಾಗುತ್ತವೆ. ಕಳೆದ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಆಗಿತ್ತು. ೨ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರು. ೫ ವರ್ಷಗಳು ಮುಕ್ತಾಯವಾಯಿತು. ಇದುವರೆಗೂ ಕಾಮಗಾರಿ ಶೇ ೫೦ ರಷ್ಟು ಆಗಿಲ್ಲ. ಇಲ್ಲಿಂದ ಹೋಗುತ್ತಿರುವ ತಂಡಗಳಿಗೆ ವಿವರಣೆ ನೀಡಲು ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಅವರು ಮುಂದಿನ ಚುನಾವಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನರಿಗೆ ಮಾಹಿತಿಗಳನ್ನು ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ನಾವೂ ಸ್ವತಃ ಯೋಜನೆಯ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದೆವು. ಭಾಷಣಗಳಲ್ಲಿ ಇಲ್ಲಿ ಹೇಳುತ್ತಿರುವ ಹೇಳಿಕೆಗಳಿಗೂ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಂತಕ್ಕೆ ಹೆಚ್ಚು ವ್ಯತ್ಯಾಸವಿದೆ. ೧೦ ವರ್ಷವಾದರೂ ನೀರು ಬರುವುದು ಖಚಿತವಿಲ್ಲ ಎಂದರು. ರೈತ ಮುಖಂಡ ಮಂಜುನಾಥ್ ಇದ್ದರು.