Home News ಏಷ್ಯಾದಲ್ಲೆ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳು

ಏಷ್ಯಾದಲ್ಲೆ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳು

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳಿವೆ. ರೇಷ್ಮೆ ಬೆಳೆಗಾರ ಹಾಗೂ ನೂಲು ಬಿಚ್ಚುವವರನ್ನು ಭೇಟಿ ಮಾಡಿ ಅವರ ತೊಂದರೆಗಳನ್ನು ಕೇಳಿದ್ದೇನೆ. ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ರಾಜ್ಯ ಬಿಜೆಪಿ ರೇಷ್ಮೆ ಬೆಳೆಗಾರರ ಪ್ರಕೋಷ್ಟದ ಸಹ ಸಂಚಾಲಕ ಸಿ. ವಿ. ಲೋಕೇಶ್‌ಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಚೆಗೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರು ಮತ್ತು ರೀಲರುಗಳು ಅನೇಕ ಸಮಸ್ಯೆಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಅವರ ಕಷ್ಟಗಳನ್ನು ತೋಡಿಕೊಂಡರು. ಮುಖ್ಯವಾಗಿ ಸರ್ಕಾರಕ್ಕೆ ಕಟ್ಟುವ ಶುಲ್ಕದ ಮೊತ್ತ ಜಾಸ್ತಿಯಾಗಿದ್ದು ಅದನ್ನು ಕಡಿಮೆ ಮಾಡಿದರೆ ಅನುಕೂಲಕರ.
ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ಸುಮಾರು ೭೦ ಜನ ಕೆಲಸಗಾರರು ಇರಬೇಕಿದ್ದರೂ ಕೇವಲ ೨೫ ಜನ ಮಾತ್ರ ಇರುತ್ತಾರೆ, ಸರ್ಕಾರ ಈ ಕೂಡಲೇ ಉಳಿದ ಕೆಲಸಗಾರರನ್ನು ತುಂಬಿ ಮಾರುಕಟ್ಟೆಯ ಕೆಲಸ ಸುಗಮವಾಗಿ ನಡೆಯಲು ಸಹಕಾರಿಯಾಗಬೇಕು.
ಇ ಹರಾಜು ನಡೆಯುತ್ತಿರುವ ಮಾರುಕಟ್ಟೆಯಲ್ಲಿ ಅದನ್ನು ನೋಡಿಕೊಳ್ಳುವ ನುರಿತ ಕಂಪ್ಯೂಟರ್ ವ್ಯಕ್ತಿಯೇ ಇಲ್ಲದೇ ಇರುವುದು ಸೋಜಿಗದ ಸಂಗತಿ. ಸುಮಾರು ೪ ತಿಂಗಳ ಹಿಂದೆ ಹೊಸಕೋಟೆ ತಾಲ್ಲೂಕಿನ ರೈತನಾದ ಭೈರೇಗೌಡ ಎಂಬುವರ ಗೂಡು ಮಾರುಕಟ್ಟೆಯಲ್ಲಿಯೇ ಕಳ್ಳತನವಾಗಿದ್ದು, ಆ ನಂತರ ಕಳ್ಳ ಸಿಕ್ಕಿದ್ದರೂ ಸಹ ಈವರೆಗೂ ರೈತನಿಗೆ ಗೂಡಿನ ಹಣ ಸೇರಿಲ್ಲ, ಹಣಕ್ಕಾಗಿ ದೂರದ ಹೋಸಕೊಟೆಯಿಂದ ದಿನವೂ ಶಿಡ್ಲಘಟ್ಟಕ್ಕೆ ವೃಥಾ ಬಂದು ಹೋಗುತ್ತಿದ್ದಾರೆ. ಸಂಬಂಧಪಟ್ಟವರು ಈ ಕೂಡಲೆ ರೈತನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸಿ.ಸಿ. ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದೇ ಸುಮಾರು ದಿನಗಳಾಗಿದ್ದು ಈ ಕೂಡಲೆ ಅವುಗಳನ್ನು ದುರಸ್ಥಿಗೊಳಿಸಬೇಕು. ಇಂದು ಭಾರತಾದ್ಯಂತ ಸರ್ಕಾರದ ಮುಖ್ಯ ಯೋಜನೆಯಾದ ಡಿಜಿಟಲ್ ಇಂಡಿಯಾ ಮುಖಾಂತರ ಕ್ಯಾಷ್‌ಲೆಸ್ ವ್ಯವಹಾರ ಮಾಡಬೇಕು ಎಂಬ ವ್ಯವಸ್ಥೆಯಿದ್ದರು ಸಹ ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಮಾತ್ರ ಎಂಬ ಬೊರ್ಡು ತೂಗುಹಾಕಿರುವುದು ಸರ್ಕಾರವನ್ನು ಅಣುಕಿಸುವಂತಿದೆ. ಸರ್ಕಾರವು ಬ್ಯಾಂಕ್‌ನ ಬೀಮ್ ಆಪ್ ಮುಖಾಂತರ ಇ ಹರಾಜಿನಲ್ಲಿ ತೊಡಗಿಸಿಕೊಂಡು ರೈತ ಹಾಗೂ ನೂಲು ಬಿಚ್ಚುವವರು ಹಣವನ್ನು ವರ್ಗಾಯಿಸಿಕೊಳ್ಳಬಹುದು. ಈ ಒಂದು ವ್ಯವಸ್ಥೆಯನ್ನು ಈ ಕೂಡಲೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಏಷ್ಯಾದಲ್ಲೆ ಅತಿ ದೊಡ್ಡ ಗೂಡು ಮಾರುಕಟ್ಟೆಯಾದ ಶಿಡ್ಲಘಟ್ಟಕ್ಕೆ ಮಾನ್ಯ ಮಂತ್ರಿಗಳು ಇದುವರೆಗೂ ಭೇಟಿ ಕೊಡದೆ ಇರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಈ ಎಲ್ಲ ಸಮಸ್ಯೆಗಳನ್ನು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್‌ಅವರಿಗೆ ತಿಳಿಸಿ ಈ ಕೂಡಲೆ ಮೇಲ್ಕಂಡ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬೇಕೆಂದು ಕೋರಿದ್ದೇನೆ. ಈ ಎಲ್ಲ ವಿಷಯಗಳನ್ನು ರೇಷ್ಮೆ ಇಲಾಖೆಯ ಮುಖ್ಯಸ್ಥರಿಗೂ ಹಾಗೂ ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ಖುದ್ದು ಭೇಟಿಯಾಗಿ ತರುವುದಾಗಿ ತಿಳಿಸಿದರು.