ಕುರುಬ ಸಮಾಜದಲ್ಲಿ ಐಕ್ಯತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವುದು ಈ ಯಾತ್ರೆಯ ಉದ್ದೇಶ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಹೊಸದುರ್ಗ ಕೆಲ್ಲೋಡು ಶಾಖಾಮಠದ ಮುಖ್ಯಸ್ಥ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ರಾಜ್ಯಾದ್ಯಂತ ಹೊರಟಿರುವ ಕನಕಜ್ಯೋತಿ ಯಾತ್ರೆಯು ಗುರುವಾರ ನಗರಕ್ಕೆ ಆಗಮಿಸಿದ್ದು, ಓಟಿ ವೃತ್ತದಲ್ಲಿರುವ ಕನಕ ಭಜನೆ ಮನೆಯಲ್ಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕನಕ ಜ್ಯೋತಿ ಯಾತ್ರೆಯನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆರಂಭಿಸಲಾಗಿದೆ. ಹಾಲು ಮತಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯಕ್ಕೆ ತಮ್ಮ ಕೈಲಾದಷ್ಟು ಶಕ್ತಿ ತುಂಬಿದ್ದಾರೆ. ಸರ್ಕಾರ ನೀಡುವ ಸಹಾಯ ಮತ್ತು ನಮ್ಮ ಸಮುದಾಯದ ಬೆಂಬಲದಿಂದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಪೀಠವು ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲ ಶೋಷಿತ ವರ್ಗದ ಪ್ರತಿಭಾವಂತರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಎಂದರು.
ಕನಕದಾಸರು ಕುರುಬರಿಗೆ ಮಾತ್ರ ಸೀಮಿತವಾದವರಲ್ಲ. ಎಲ್ಲ ಜಾತಿಯ ಬಡವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಹಂಬಲದಿಂದ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಹೋರಾಡಿದ್ದಾರೆ. ಇವರ ಉದ್ದೇಶ ಈಡೇರಿಸುವುದು ಮಠದ ಜವಾಬ್ದಾರಿ. ಹಾಲು ಮತಸ್ಥರು ಒಗ್ಗಟ್ಟಿನಿಂದ ಸಮಾಜ ಕಟ್ಟಿ ಕನಕದಾಸರ ಕನಸು ಈಡೇರಿಸಬೇಕು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಕೇವಲ 210 ದಿನಗಳಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಖಾ ಮಠ ಸ್ಥಾಪಿಸಿ ಶ್ರೀಮಠದ ಆವರಣದಲ್ಲಿ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರವನ್ನು ಮುಖ್ಯಮಂತ್ರಿಗಳು ಫೆಬ್ರುವರಿ 9ರಂದು ಲೋಕಾರ್ಪಣೆ ಮಾಡಲಿದ್ದು, ಹಾಲು ಮತಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕನಕಜ್ಯೋತಿ ಯಾತ್ರೆ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಂಜುನಾಥ್, ಗೌರವಾಧ್ಯಕ್ಷ ಗಣೇಶಪ್ಪ, ಉಪಾಧ್ಯಕ್ಷರಾದ ಎಚ್.ಬಿ.ಎನ್.ರಾಮಾಂಜಿನಪ್ಪ, ವಿ.ರಾಮಣ್ಣ, ಮುಖಂಡರಾದ ಎಂ.ನಾರಾಯಣಸ್ವಾಮಿ, ಆನಂದ್, ಎ.ರಾಮಚಂದ್ರಪ್ಪ, ಕೆ.ಸಿ.ನಾರಾಯಣಸ್ವಾಮಿ, ಎಂ.ರಾಮಾಂಜಿ, ಆರ್.ಎಂ.ನವೀನ್, ಎನ್.ಅಶೋಕ್, ಮಂಜುಳಮ್ಮ ಹಾಜರಿದ್ದರು.