Home News ಒಂದು ಕೋಟಿ ರೂ ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ

ಒಂದು ಕೋಟಿ ರೂ ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ

0

ಸರ್ಕಾರದಿಂದ ಒಂದು ಕೋಟಿ ರೂಪಾಯಿಗಳ ಅನುದಾನ ಸಿಕ್ಕಿದ್ದು, ಸರ್ವ ಜನಾಂಗದ ಕಾರ್ಯಕ್ರಮಗಳಿಗೂ ಅನುಕೂಲವಾಗುವ ರೀತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸುವುದಾಗಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡ ಮುಗಿಲಡಿಪಿ ನಂಜಪ್ಪ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಗರದ ಮಯೂರ ಸರ್ಕಲ್‌ ಬಳಿಯಿರುವ ವಾಲ್ಮೀಕಿ ದೇವಸ್ಥಾನದ ಪಕ್ಕ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಭೂಮಿ ಪೂಜೆಯನ್ನು ಏಪ್ರಿಲ್‌ 13 ರ ಗುರುವಾರ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸ್ವಾಮೀಜಿಯವರನ್ನು ನಗರದ ಬಸ್‌ ನಿಲ್ದಾಣದಿಂದ ಪಲ್ಲಕ್ಕಿಯೊಡನೆ ಪೂರ್ಣ ಕುಂಭದೊಂದಿಗೆ ವಿವಿಧ ಕಲಾ ತಂಡಗಳೊಡನೆ ಮೆರವಣಿಗೆ ಮೂಲಕ ಕರೆತರಲಾಗುತ್ತದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮತ್ತು ಸಂಸದ ಕೆ.ಎಚ್‌.ಮುನಿಯಪ್ಪ ಸರ್ಕಾರದಿಂದ ಅನುದಾನ ಕೊಡಿಸುವ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೊರತೆಯಿದ್ದ ನಿವೇಶನಕ್ಕೆ ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ನಿವೇಶನ ಖರೀದಿಸಿ ಕೊಟ್ಟು ಸಮುದಾಯ ಭವನ ನಿರ್ಮಾಣಕ್ಕೆ ನೆರವಾಗಿದ್ದಾರೆ. ಸಮುದಾಯ ಭವನವು ಎಲ್ಲಾ ಸಮುದಾಯಗಳ ಕಾರ್ಯಕ್ರಮ, ಮದುವೆ ಮೊದಲಾದ ಶುಭ ಕಾರ್ಯಗಳು ನಡೆಯಲು ಸಹಾಯವಾಗಲಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ರಾಜೇಂದ್ರ, ಕೆ.ಪಿ.ನಟರಾಜ್‌, ಕೆ.ಬಿ.ಮಂಜುನಾಥ್‌ ಹಾಜರಿದ್ದರು.

error: Content is protected !!