Home News ಕನ್ನಮಂಗಲ ಗ್ರಾಮದಲ್ಲಿ ‘ಅತ್ತೆಮ್ಮನ ಅಂಗಳ ಪೂಜೆ’ ಆಚರಣೆ

ಕನ್ನಮಂಗಲ ಗ್ರಾಮದಲ್ಲಿ ‘ಅತ್ತೆಮ್ಮನ ಅಂಗಳ ಪೂಜೆ’ ಆಚರಣೆ

0

ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಂಗಳವಾರ ಮಳೆರಾಯನ ಪೂಜೆಯ ಒಂದು ರೀತಿಯಾದ ‘ಅತ್ತೆಮ್ಮನ ಅಂಗಳ ಪೂಜೆ’ಯನ್ನು ಹಳ್ಳಿಗರು ಒಗ್ಗೂಡಿ ವಿಶೇಷವಾಗಿ ಆಚರಿಸಿದರು.
‘ಮಳೆ ಬೆಳೆ ಚೆನ್ನಾಗಿ ಆಗಿ ಜನ, ಜಾನುವಾರಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮ್ಮನ ಅಂಗಳ ಪೂಜೆಯೂ ಒಂದು. ನಮ್ಮಲ್ಲಿ ಮಳೆಗೆ ಹೆಸರುಗಳಿಟ್ಟಿದ್ದಾರೆ. ಹದಿನೈದು ದಿನಕ್ಕೊಮ್ಮೆಯಂತೆ ಮಳೆ ಹೆಸರು ಬದಲಾಗುತ್ತದೆ. ರೇವತಿಯಿಂದ ಪ್ರಾರಂಭವಾಗಿ ಜೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಮಳೆಯೇ ಅತ್ತೆ ಮಳೆ. ಈ ಮಳೆಯು ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರ ದಿನ ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ವಾಡಿಕೆ’ ಎಂದು ಗ್ಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ ತಿಳಿಸಿದರು.
‘ಪೂಜೆ ಮಾಡುವ ದಿನ ಕುಂಬಾರರ ಮನೆಯಿಂದ ಒಲೆ ಬೂದಿಯನ್ನ ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆಮಾಡಿ ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರು ರಾಗಿ ಹುಲ್ಲು, ಅವರೆ ಸೊಪ್ಪು, ಜೋಳದ ರೆಕ್ಕೆಗಳನ್ನ ಕುರಿಯ ರಕ್ತದಲ್ಲಿ ಬೆರಸಿ ಆ ಹುಲ್ಲನ್ನು ಊರಿನ ಸುತ್ತಲೂ ಗಸ್ತು ಹಾಕಲಾಗುತ್ತದೆ. ಹಾಗೂ ಕುಂಬಾರನ ಮನೆಯಿಂದ ತಂದ ಬೂದಿಯನ್ನ ಊರಿನ ಪ್ರತಿಯೊಬ್ಬರೂ ತೆಗೆದುಕೊಂಡು ಹೋಗಿ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬರಬೇಕು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ, ಜನ, ಜಾನುವಾರಗಳು ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ. ಎಂಬ ನಂಬಿಕೆಯಿಂದ ಆಚರಣೆಯನ್ನು ಎಲ್ಲರೂ ಒಗ್ಗೂಡಿ ನಡೆಸಿದೆವು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್‌ ವಿವರಿಸಿದರು.
ಗ್ರಾಮದ ಆಂಜನೇಯ, ಕೆ.ಎಂ. ಮಂಜುನಾಥ, ಚಿಕ್ಕ ಆಂಜಿನಪ್ಪ, ಆರ್‌.ರಘುನಾಥ್, ಕೆ.ಎನ್ ಮುನಿಯಪ್ಪ, ಕದಿರಪ್ಪ, ಮುನಿರಾಜು, ನಾರಾಯಣಸ್ವಾಮಿ,ಮುನಿನಾರಾಯಣಪ್ಪ, ಕೆ.ಇ.ಕೇಶವ, ಪಿಳ್ಳನರಸಿಂಹಯ್ಯ ಹಾಜರಿದ್ದರು.

error: Content is protected !!