ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ನಾಲ್ಕು ಕಂಪ್ಯೂಟರ್ ಗಳು, ಬ್ಯಾಟರಿ ಮತ್ತು ಸೋಲಾರ್ ಯುಪಿಎಸ್ ಪ್ಯಾನಲ್ ಕಳುಹಿಸಿದ್ದಾರೆ.
“ನಮ್ಮ ಶಾಲೆಯ ಮಕ್ಕಳ ಹಬ್ಬವನ್ನು ಫೆಬ್ರುವರಿ ೧೧ ರಂದು ಆಚರಿಸಿದ್ದೆವು. ಅದಕ್ಕೆ ಜಿಲ್ಲಾಧಿಕಾರಿಯವರನ್ನು ಆಹ್ವಾನಿಸಲು ಹೋಗಿದ್ದೆವು. ನಮ್ಮ ಮಕ್ಕಳ ಬರಹಗಳ ಸಂಕಲನ “ಶಾಮಂತಿ” ಪುಸ್ತಕವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಗೆ ಬರಲು ಒಪ್ಪಿದರು. ಬಂದವರು ನಮ್ಮ ಶಾಲೆಯ ವಾತಾವರಣ, ಸಮುದಾಯದೊಂದಿಗಿನ ಸೌಹಾರ್ಧ ಸಂಬಂಧ ಕಂಡರು. ಆ ವೇಳೆ ನಾವು ಶಾಲೆಗೆ ಕಂಪ್ಯೂಟರ್ ಬೇಕೆಂದು ಮನವಿ ಸಲ್ಲಿಸಿದೆವು. ಅವರು ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಚೆಗೆ ನಿರ್ಮಿತಿ ಕೇಂದ್ರದ ಮೂಲಕ ಶಾಲೆಗೆ ನಾಲ್ಕು ಕಂಪ್ಯೂಟರ್ ಗಳು, ಟೇಬಲ್ ಗಳು, ೨ ಬ್ಯಾಟರಿ, ೨ ಸೋಲಾರ್ ಪ್ಯಾನಲ್, ಒಂದು ಯುಪಿಎಸ್ ಕಳುಹಿಸಿಕೊಟ್ಟಿದ್ದಲ್ಲದೆ. ಸಂಬಂಧಿಸಿದವರು ಬಂದು ಎಲ್ಲವನ್ನೂ ಸಮರ್ಪಕವಾಗಿ ಅಳವಡಿಸಿಕೊಟ್ಟಿದ್ದಾರೆ” ಎಂದು ಮುಖ್ಯ ಶಿಕ್ಷಕ ಕೆ.ವಿ.ಚೌಡರೆಡ್ಡಿ ತಿಳಿಸಿದರು.
“ಕಂಪ್ಯೂಟರ್ ಗಳು ಶಾಲೆಗೆ ಬಂದಿರುವುದರಿಂದ ಮಕ್ಕಳು ಮತ್ತು ಶಿಕ್ಷಕರಲ್ಲಿ ಉತ್ಸಾಹ ಮೂಡಿದೆ. ಕಂಪ್ಯೂಟರ್ ಕಲಿಕೆಗೆ ಹಾಗೂ ಪಾಠಕ್ಕೆ ಸಂಬಂಧಿಸಿದ ವೀಡಿಯೋ ತೋರಿಸಲು ಕಲಿಕೋಪಕರಣದಂತೆ ಬಳಸಲು ಅನುಕೂಲವಾಗುತ್ತದೆ. ಸೋಲಾರ್ ಯುಪಿಎಸ್ ಕೊಟ್ಟಿರುವುದರಿಂದ ವಿದ್ಯುತ್ ಮೇಲೆ ಅವಲಂಬನೆಯಿಲ್ಲ. ಮಕ್ಕಳು ಸಂತೋಷಪಟ್ಟು ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ನಮ್ಮ ಶಾಲೆಗೆ ಈ ರೀತಿಯಲ್ಲಿ ಸಹಕಾರ ಸಿಗುವಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಸ್ನೇಹ ಯುವಕರ ಸಂಘದ ಸದಸ್ಯರ ಸಹಕಾರ ಮರೆಯಲಾಗದು” ಎಂದು ಅವರು ಹೇಳಿದರು.