ತಾಲ್ಲೂಕಿನ ಮುತ್ತೂರಿನಲ್ಲಿ ಶ್ರೀವೀರಾಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಕಸಾಪ ತಾಲ್ಲೂಕು ಘಟಕದಿಂದ ನಡೆದ “ಗಾನಸಿರಿ” ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ವೇದಬ್ರಹ್ಮಶ್ರೀ ಮುತ್ತೂರು ವೆಂಕಟೇಶಮೂರ್ತಿ ಮಾತನಾಡಿದರು.
ಹಳ್ಳಿಗಳಲ್ಲಿ ದುಡಿವ ರೈತರ, ಶ್ರಮಿಕರ ಜೀವಾಳ ಜನಪದ. ದುಡಿದು ಬಂದವರಿಗೆ ಜನಪದ ಕಲೆಗಳು ಚೈತನ್ಯವನ್ನು ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದು ಅವರು ತಿಳಿಸಿದರು.
ನಾಟಕ, ಭಜನೆ, ಹರಿಕಥೆ, ಜಾನಪದ ಕಲೆಗಳು ಹಳ್ಳಿಗಳಲ್ಲಿ ಹಿಂದೆ ಅವಿಭಾಜ್ಯ ಅಂಗಗಳಂತಿದ್ದವು. ದುಡಿವ ಜನರ ಮನರಂಜನೆಯ ಮೂಲವಾಗಿದ್ದವು. ಕಲೆಗೆ ಪ್ರೋತ್ಸಾಹ ಅಗತ್ಯವಿದೆ. ಹಳ್ಳಿಗಳಿಗೆ ಬಂದು ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುವ ಸಂಸ್ಕೃತಿ ಕಸಾಪ ಪ್ರಾರಂಭಿಸಿರುವುದು ಅಭಿನಂದನೀಯ. ಪ್ರತಿ ಹಳ್ಳಿಯಲ್ಲೂ ಕಸಾಪ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಜನಪದರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳಲ್ಲಿ ಎಲೆಮರೆ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು “ಗಾನಸಿರಿ” ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ನಮ್ಮ ಸ್ಥಳೀಯ ಕಲಾವಿದರು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪ್ರತಿನಿಧಿಗಳು ಎಂದರು.
ಸ್ಥಳೀಯ ಕಲಾವಿದರಿಂದ ಜಾನಪದ ಗೀತೆ ಗಾಯನ, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಭಜನೆ ನಡೆಯಿತು. ಮುತ್ತೂರು ವೆಂಕಟೇಶಮೂರ್ತಿ ಹಾಗೂ ವೆಂಕಟಲಕ್ಷ್ಮಮ್ಮ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗೌರವ ಕಾರ್ಯದರ್ಶಿಗಳಾದ ಸತೀಶ್, ಚಾಂದ್ ಪಾಷ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಮಂಜುನಾಥ್, ನರಸಿಂಹಮೂರ್ತಿ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಧನುಶ್ರೀ ಮಾನಸ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಪ್ಪ, ಸದಸ್ಯರಾದ ಸೂರ್ಯನಾರಾಯಣಗೌಡ, ದೇವರಾಜ್, ಮುಖಂಡ ವೆಂಕಟರಾಜೇಗೌಡ, ಬೈರೇಗೌಡ, ಎಂ.ಬಿ.ಬೈರಾರೆಡ್ಡಿ, ಅನಂತರಾಮಯ್ಯ, ಹಾರ್ಮೋನಿಯಂ ಕೆ.ವೆಂಕಟೇಶ್, ಮೂರ್ತಿ, ಅನಿಲ್, ರಾಜಣ್ಣ, ಸೊಣ್ಣೇಗೌಡ, ವೀರಾಂಜನೇಯ ಸ್ವಾಮಿ ಭಕ್ತಮಂಡಳಿ ಕಲಾವಿದರು ವೆಂಕಟರೆಡ್ಡಿ, ನವೀನ್, ಮುನಿರಾಜು, ಸುರೇಶ್, ಹಾಲು ಕೆಂಪಣ್ಣ ಹಾಜರಿದ್ದರು.