ನಗರದ ಹಳೆ ಪೆಟ್ರೋಲ್ ಬಂಕ್ ಹಿಂದಿನ ರಸ್ತೆಯಲ್ಲಿರುವ ಶಿಕ್ಷಕರಾದ ಶ್ರೀನಿವಾಸರೆಡ್ಡಿ ಮತ್ತು ದಾಕ್ಷಾಯಿಣಿ ದಂಪತಿಯ ಮನೆಯಲ್ಲಿ ಮಂಗಳವಾರ ಸಂಜೆ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಮಾತನಾಡಿದರು.
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ರಾಮಾಯಣದಲ್ಲಿ ರಾಮ ಲಕ್ಷ್ಮಣನಿಗೆ ಹೇಳುವ ಮಾತು ಸರ್ವಕಾಲಿಕವದದ್ದು. ನಮ್ಮ ಜನ್ಮಭೂಮಿಗೆ ನಾವು ಸದಾ ಋಣಿಗಳು. ನಮ್ಮ ತಾಯ್ನೆಲವನ್ನು ಸಸ್ಯಶಾಮಲೆಯನ್ನಾಗಿಸಲು ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಸಂಕಲ್ಪಿಸೋಣ ಎಂದು ಅವರು ತಿಳಿಸಿದರು.
೧೮೬೨ ರಿಂದ ೧೮೭೦ ರವರೆಗೂ ಮೈಸೂರು ಮತ್ತು ಕೂರ್ಗ್ ನ ಮುಖ್ಯ ಕಮೀಷನರ್ ಆಗಿದ್ದ ಬೌರಿಂಗ್ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಅವರು, ’ನಂದಿ ಬೆಟ್ಟದ ಮೇಲೆ ನಿಂತರೆ ೩೦೦ ಕೆರೆಗಳು ಕಾಣುತ್ತವೆ. ಚಿಕ್ಕಬಳ್ಳಾಪುರವೆಂಬ ಊರು ಬಹುಶಃ ಮೈಸೂರು ಸಂಸ್ಥಾನದಲ್ಲೇ ಸುಭಿಕ್ಷವಾದ ಊರೆನ್ನಬಹುದು. ಉತ್ತಮ ವ್ಯಾಪಾರ ವಹಿವಾಟು ನಡೆಯುವ ದೊಡ್ಡ ಊರು ಚಿಕ್ಕಬಳ್ಳಾಪುರ. ಇಲ್ಲಿ ಸಾಕಷ್ಟು ನೀರಿನ ಪೂರೈಕೆ ಇದ” ಎಂದು ಬರೆದಿದ್ದಾರೆ. ಸುಮಾರು ನೂರೈವತ್ತು ವರ್ಷಗಳ ಹಿಂದಿನ ನಮ್ಮ ಪ್ರಕೃತಿ ಸಂಪತ್ತನ್ನು ಪುನರುಜ್ಜೀವಗೊಳಿಸುವಲ್ಲಿ ನಾವು ಕಾರ್ಯಪ್ರವೃತ್ತರಾದರೆ ಅದು ಬಹುದೊಡ್ಡ ಕನ್ನಡ ಸೇವೆಯಾಗುತ್ತದೆ ಎಂದರು.
ಎಸ್.ಎಫ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಕನ್ನಡದ ಕಂಪು ಮನೆಮನಗಳಲ್ಲಿ ಹರಡಬೇಕು. ಈ ನಿಟ್ಟಿನಲ್ಲಿ ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುವು ಮಾಡಿಕೊಡುವ ಮೂಲಕ ಕನ್ನಡದ ಸೊಗಡು ಹರಡುವಲ್ಲಿ ಮತ್ತು ಮನೆಗೆ ಬಂದ ಕನ್ನಡ ಅಭಿಮಾನಿಗಳಿಗೆ ಸತ್ಕರಿಸುವ ಮೂಲಕ ನಮ್ಮ ತಾಲ್ಲೂಕಿನ ಹಲವಾರು ಕುಟುಂಬದವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡುವ ಮೂಲಕ ನಮ್ಮ ಭಾಷೆಯನ್ನು ಪ್ರೀತಿಸುವ ಜನರನ್ನು ಬೆಳೆಸುವುದೇ ಕಸಾಪದ ಉದ್ದೇಶವಾಗಿದೆ. ನಮ್ಮ ತಾಲ್ಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕಸಾಪ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರೋತ್ಸಾಹ ಸಿಗುತ್ತಿದೆ. ಶಾಲೆಗಳಲ್ಲಿ, ಮನೆಗಳಲ್ಲಿ, ಹಸುರು ಪರಿಸರದ ನಡುವೆ, ಸಾಧಕರ ಸಂಗಡ ನಾವು ಕನ್ನಡ ಡಿಂಡಿಮವನ್ನು ಬಾರಿಸುತ್ತಿದ್ದೇವೆ ಎಂದು ಹೇಳಿದರು.
ಜಾನ್ಸಿರೆಡ್ಡಿ, ಶ್ರೀನಿವಾಸರೆಡ್ಡಿ, ಮುನಿರಾಜು, ಸುಂದರಾಚಾರಿ, ಪ್ರಕೃತಿ, ಚಿಕ್ಕನರಸಿಂಹಪ್ಪ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಧನುಶ್ರೀ ಮಾನಸ ಭಕ್ತಿ ಗೀತೆಗಳನ್ನು ಹಾಡಿದರು. ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ಟಿ.ಟಿ.ನರಸಿಂಹಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮೋಹನ್, ಜನಾರ್ಧನ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಕಸಾಪ ಕಾರ್ಯದರ್ಶಿಗಳಾದ ಚಾಂದ್ ಪಾಷ, ಸತೀಶ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಮಂಜುನಾಥ್, ಎಸ್.ವಿ.ನಾಗರಾಜರಾವ್, ಮನೋಜ್, ಸರಸ್ವತಮ್ಮ, ಯಾಸ್ಮಿನ್, ಚಂದ್ರಕಲಾ, ಅಮರನಾಥ್, ಪ್ರಕಾಶ್, ದೇವರಾಜ್, ಅಮಿತ್ ರೆಡ್ಡಿ ಹಾಜರಿದ್ದರು.