ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ರಸಋಷಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆಸಿದ ಕುವೆಂಪು ರಚನೆಗಳ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ. ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಆಶಯವಾಗಿತ್ತು. ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಮಾತೃ ಭಾಷೆ ಬಗ್ಗೆ ಸದಾ ಹೇಳುತ್ತಿದ್ದರು, ಅವರ ಅನೇಕ ಕೃತಿಗಳಲ್ಲಿ ಕನ್ನಡ ನಾಡು, ನುಡಿಯ ವರ್ಣನೆಯನ್ನು ಗಮನಿಸಿದರೆ ಸಾಕು ಅವರಲ್ಲಿನ ಭಾಷಾ ಪ್ರೇಮ ತಿಳಿಯುತ್ತದೆ. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ ಕುವೆಂಪು ಎಂದು ಹೇಳಿದರು.
ಏಳನೇ ತರಗತಿಯ ಡಿ.ಲಕ್ಷ್ಮೀ(ಪ್ರಥಮ), ಆರನೇ ತರಗತಿಯ ಎಂ.ರಂಜನ್(ದ್ವಿತೀಯ), ಆರನೇ ತರಗತಿಯ ಎಂ.ತಿಲಕ್(ತೃತೀಯ) ರಾಗಿದ್ದು, ವಿಜೇತರಿಗೆ ಕುವೆಂಪು ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಶಾಲಾ ಗ್ರಂಥಾಲಯಕ್ಕೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಕುವೆಂಪು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾ, ನೇತ್ರಾವತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಪುಷ್ಪಾ ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಮುನಿವೆಂಕಟಸ್ವಾಮಿ, ಬಾಬು, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ಪಾಷ, ಭಾರತಿ, ಅಶೋಕ್, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕೆಂಪೇಗೌಡ, ವೇಣುಗೋಪಾಲ್ ಹಾಜರಿದ್ದರು.