Home News ಕೃಷಿಯಲ್ಲೂ ತಂತ್ರಜ್ಞಾನದ ಬಳಕೆಯಾಗಲಿ

ಕೃಷಿಯಲ್ಲೂ ತಂತ್ರಜ್ಞಾನದ ಬಳಕೆಯಾಗಲಿ

0

ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು, ತಾಂತ್ರಿಕ ಸಲಹೆಗಳನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಬೆಳೆ ಬೆಳೆಯುವ ಕಡೆಗೆ ರೈತರು ಹೆಚ್ಚು ಆಸಕ್ತಿ ತೋರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ೨೦೧೭-–೧೮ ನೇ ಸಾಲಿನ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ನೂತನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವುದರ ಕಡೆಗೆ ಗಮನಹರಿಸಬೇಕು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರೈತರ ಭೂಮಿಗೆ ಬೇಟಿ ನೀಡಿ ರೈತರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ತಲುಪಿಸುವಂತಹ ಪ್ರಾಮಾಣಿಕ ಸೇವೆ ಮಾಡಬೇಕು. ನೀರಿನ ಅಗತ್ಯಕ್ಕೆ ತಕ್ಕಂತಹ ಬೆಳೆಗಳನ್ನು ಬೆಳೆಯುವುದರ ಕಡೆಗೆ ರೈತರು ಗಮನ ಹರಿಸಬೇಕು, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವಂತಹ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಬೆಳೆಯುವುದು ರೂಢಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬೇಟಿ ನೀಡಿ ಕಾಲ ಕಾಲಕ್ಕೆ ಮಾಹಿತಿಯನ್ನು ಪಡೆಯಬೇಕು, ಇಲಾಖಾಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ಸೌಲತ್ತುಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಕಚೇರಿಗೆ ಬರುವ ರೈತರನ್ನು ಗೌರವದಿಂದ ಕಾಣುವ ಮನೋಭಾವವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ರೈತರ ಭೂಮಿಗಳಿಗೆ ಖುದ್ದು ಹೋಗಬೇಕು ಅವರಿಗೆ ಅಗತ್ಯವಾಗಿ ಬೇಕಾಗಿರುವ ಮಾಹಿತಿ ಹಾಗೂ ಸಲಹೆಗಳನ್ನು ನೀಡುವುದರ ಜೊತೆಗೆ ಮಣ್ಣಿನ ಪರೀಕ್ಷೆ, ಹಾಗೂ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ, ಭೂಮಿಯಲ್ಲಿ ಕಡಿಮೆಯಾಗಿರುವ ಲವಣಾಂಶಗಳು, ಹಾಗೂ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ, ಇಲಾಖೆಗಳಿಂದ ಸ್ತಬ್ದ ಚಿತ್ರಗಳ ಸಮೇತ ರೈತರಿಗೆ ಮಾಹಿತಿಗಳನ್ನು ನೀಡಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಸಿ.ದೇವೆಗೌಡ, ಡಾ.ಕೆ.ಆರ್.ಹುಲ್ಲುನಾಚೇಗೌಡ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಗೋಪಾಲರಾವ್ ಹಾಜರಿದ್ದರು.
ಅಧಿಕಾರಿಗಳು ಸ್ಪಂದಿಸುವುದಿಲ್ಲ: ಸಭೆ ಸಮಾರಂಭಗಳಲ್ಲಿ ಮಾತ್ರ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಗಂಟೆಗಟ್ಟಲೇ ಮಾಹಿತಿ ನೀಡುವ ಅಧಿಕಾರಿಗಳು ಕಚೇರಿಗೆ ಹೋದಾಗ ರೈತರನ್ನು ಕನಿಷ್ಠ ಸೌಜನ್ಯದಿಂದಲೂ ಮಾತನಾಡುವುದಿಲ್ಲ. ಇಲಾಖೆಯಿಂದ ಏನೇನು ಯೋಜನೆಗಳಿವೆ ಎಂದು ಕೇಳಿದರೆ ಅದಕ್ಕೂ ಮಾಹಿತಿ ನೀಡದೇ ಸದಾ ಕಚೇರಿಯಲ್ಲಿ ನಾಲ್ಕೈದು ಮಂದಿಯನ್ನು ಹಾಕಿಕೊಂಡು ಕಾಲ ಕಳೆಯುತ್ತಾರೆ. ಇವರಿಗೆ ಹಸಿರು ಶಾಲು ಹಾಕಿರುವವರು ಮಾತ್ರ ರೈತರ ಹಾಗೆ ಕಾಣಿಸುತ್ತಾರೆ. ಉಳಿದ ಅನಕ್ಷರಸ್ಥರೂ ಸೇರಿದಂತೆ ಬಡ ರೈತರು ಇವರ ಕಣ್ಣಿಗೆ ಕಾಣುವುದಿಲ್ಲ ಎಂದು ಶಾಸಕರ ಸಮ್ಮುಖದಲ್ಲಿಯೇ ಸಾರ್ವಜನಿಕರು ಸಭೆಯಲ್ಲಿ ಕೃಷಿ ಅಧಿಕಾರಿ ಬಿ.ಸಿ.ದೇವೇಗೌಡರ ವಿರುದ್ದ ಹರಿಹಾಯ್ದರು.

error: Content is protected !!