ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರಿಗೆ ವಿಶ್ವ ಒಕ್ಕಲಿಗರ ಮಹಾ ವೇದಿಕೆ ವತಿಯಿಂದ ಇತ್ತೀಚೆಗೆ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕೃಷಿ ಸಾಧಕ’ ಮತ್ತು ‘ವಿಶ್ವಮಾನ್ಯ ಒಕ್ಕಲಿಗ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಹಬ್ಬದ ಆಚರಣೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ಎಚ್.ಜಿ.ಗೋಪಾಲಗೌಡ ಅವರ ಕೃಷಿ ಬದುಕಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕಡಿಮೆ ನೀರು ಬಳಕೆ ಹಾಗೂ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪಿನ ಬೇಸಾಯ, ಗುಣಮಟ್ಟದ ರೇಷ್ಮೆ ಗೂಡಿನ ಬೆಳೆ, ಮಳೆಯಾಶ್ರಿತವಾಗಿ ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ನೂತನ ಮಾದರಿಯ ಚಂದ್ರಂಕಿ, ಹೂಜಿ ನೊಣ ತಡೆಯಲು ಮಾಡಿರುವ ಆವಿಷ್ಕಾರ, ಕೃಷಿ ಅಧ್ಯಯನಕ್ಕಾಗಿ ರಾಷ್ಟ್ರದ ನಾನಾ ರಾಷ್ಟ್ರಗಳ ಭೇಟಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮುಂತಾದ ಕೃಷಿ ಸಾಧನೆಯನ್ನು ಗುರುತಿಸಲಾಗಿದೆ.