ತಾಲ್ಲೂಕಿನಾದ್ಯಂತ ಇರುವ ಕೆರೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ರಾಜಕಾಲುವೆ ಮತ್ತು ಕೆರೆಗಳಲ್ಲಿರುವ ಜಾಲಿ ಗಿಡಗಳನ್ನು ತಾಲ್ಲೂಕು ಆಡಳಿತ ಕೂಡಲೇ ತೆರವುಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳೊಂದಿಗೆ ಸೋಮವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ತಾಲ್ಲೂಕಿನಾಧ್ಯಂತ ಇರುವ ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಬೇಕು. ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ತೆಗೆಯುವಂತೆ ಒತ್ತಾಯಿಸಿ ಸಂಘಟನೆಯಿಂದ ಈ ಹಿಂದೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾಲ್ಲೂಕು ಆಡಳಿತ ಕೆಲವೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತುಗಳನ್ನು ನಂಬಿ ತಾವು ಯಾವುದೇ ಕೆರೆ ಒತ್ತುವರಿ ಮಾಡದಿರುವುದು ನಾಗರಿಕರಲ್ಲಿ ಹಲವು ಅನುಮಾನಗಳು ಮೂಡಿಸಿವೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಆಯಾ ತಾಲ್ಲೂಕು ಆಡಳಿತ ಕೆರೆ ಒತ್ತುವರಿ ತೆರವು ಮಾಡಲು ಮುಂದಾಗಿದ್ದರೂ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಯಾವುದೇ ಪ್ರಗತಿ ಆಗಿಲ್ಲ. ಕೆಲ ಸಂಘಟನೆಗಳ ಪದಾಧಿಕಾರಿಗಳು ಪ್ರಭಾವಿಗಳ ಕೈ ಗೊಂಬೆಯಂತೆ ವರ್ತಿಸುವ ಜೊತೆಗೆ ಕೆರೆ ಒತ್ತುವರಿ ಮಾಡಿಕೊಂಡಿರುವವರ ಪರ ವಹಿಸಿ ತಮಗೆ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ವಿನಾಕಾರಣ ಒತ್ತುವರಿ ತೆರವಿಗೆ ಅಡ್ಡಿಯುಂಟು ಮಾಡುತ್ತಿದೆ. ಹಾಗಾಗಿ ಕೂಡಲೇ ತಾವು ಸ್ಥಳ ಪರಿಶೀಲನೆ ನಡೆಸಿ ನಿಜವಾದ ರೈತ ಒತ್ತುವರಿ ಸ್ಥಳದಲ್ಲಿ ದನಕರುಗಳಿಗಾಗಿ ಮೇವು ಬೆಳೆದಿದ್ದಾರೆಯೇ ಅಥವ ಮತ್ತೇನು ಬೆಳೆ ಇಟ್ಟಿದ್ದಾರೆ ಎಂಬುದನ್ನು ಅರಿತು ಒತ್ತುವರಿ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಸ್.ಅಜಿತ್ಕುಮಾರ್ರೈ ಮಾತನಾಡಿ, ಈಗಾಗಲೇ ತಾಲ್ಲೂಕಿನಾದ್ಯತ ಇರುವ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ತೆಗೆಯಲು ಅರಣ್ಯ ಇಲಾಖೆ ಮುಂದಾಗಬೇಕು. ಎಚ್.ಎನ್.ವ್ಯಾಲಿ ನೀರು ಬರುವ ಕೆರೆಗಳ ಒತ್ತುವರಿಯನ್ನು ಮೊದಲು ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಚ್.ಮುದ್ದುರಾಜ್, ಎಂ.ಎಸ್.ಮಂಜುನಾಥ, ಅರುಣ್ಬಾಬು, ಬಿ.ಕೆ.ಚನ್ನೇಗೌಡ, ಶಂಕರನಾರಾಯಣ, ರವಿಕುಮಾರ್ ಹಾಜರಿದ್ದರು.