Home News ಕೇಶವಪುರದಲ್ಲಿ ೧೪ ಕುರಿಗಳ ಸಾವು: ವಿಷಪ್ರಾಶನದಿಂದಾಗಿ ಸತ್ತ ಕುರಿಗಳು

ಕೇಶವಪುರದಲ್ಲಿ ೧೪ ಕುರಿಗಳ ಸಾವು: ವಿಷಪ್ರಾಶನದಿಂದಾಗಿ ಸತ್ತ ಕುರಿಗಳು

0

ತಾಲ್ಲೂಕಿನ ಕೇಶವಪುರದಲ್ಲಿ ಬಯಲಿನಲ್ಲಿ ಮೇಯಲು ಹೋಗಿದ್ದ ಕುರಿಗಳು ಶುಕ್ರವಾರ ಸಾವನ್ನಪ್ಪಿವೆ. ವಿಷಕಾರಿ ಮೇವು ತಿಂದು ಕುರಿಗಳು ಸತ್ತಿರುವುದಾಗಿ ಮೇಲ್ನೊಟಕ್ಕೆ ಕಂಡುಬರುತ್ತಿರುವುದಾಗಿ ಪಶುವೈದ್ಯರು ದೃಢಪಡಿಸಿದ್ದಾರೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೇಶವಪುರದ ರೈತ ಚಿನ್ನಪ್ಪ ಎನ್ನುವವರಿಗೆ ಸೇರಿದ ೧೪ ಕುರಿಗಳು ವಿಷಕಾರಿ ಮೇವು ತಿಂದು ಸಾವನ್ನಪ್ಪಿವೆ.
ರೈತ ಚಿನ್ನಪ್ಪ ಎಂದಿನಂತೆ ತನ್ನ ೧೮ ಕುರಿಗಳನ್ನು ಗ್ರಾಮದ ಸಮೀಪವೇ ಇರುವ ಬಯಲಿಗೆ ಮೇಯಲು ಹೊಡೆದುಕೊಂಡು ಹೋಗಿದ್ದಾನೆ. ಬಯಲಿನಲ್ಲಿ ಅಡ್ಡಾಡಿಕೊಂಡು ಹುಲ್ಲು ಮೇವು ಸೊಪ್ಪೊ ಸದೆ ತಿಂದಿವೆ.
ಬೆಳಗ್ಗೆ ೮ ಗಂಟೆ ಸುಮಾರಿಗೆ ಮನೆಯಿಂದ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು ಮದ್ಯಾಹ್ನದವರೆಗೂ ಕೇಶವಪುರದ ಆಸುಪಾಸಿನ ಬಯಲಿನಲ್ಲಿ ಮೇವು ತಿನ್ನಲು ಬಿಟ್ಟಿದ್ದಾನೆ.
ಮದ್ಯಾಹ್ನ ನೀರು ಕುಡಿಸಲೆಂದು ಮನೆಗೆ ಕರೆದುಕೊಂಡು ಬರುವಾಗ ಕುರಿಗಳು ಇದ್ದಕ್ಕಿದ್ದಂತೆ ಇಡೀ ದೇಹ ಸೆಟೆದುಕೊಂಡು ನಿತ್ರಾಣಗೊಂಡು ಎಲ್ಲ ಕುರಿಗಳು ಬಿದ್ದಿವೆ.
ಕೂಡಲೆ ರೈತ ಚಿನ್ನಪ್ಪ ಗಾಬರಿಗೊಂಡು ಪಶು ವೈದ್ಯರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ ಸ್ಥಳಕ್ಕೆ ವೈಧ್ಯರು ತೆರಳುವಷ್ಟರಲ್ಲಿ ೧೪ ಕುರಿಗಳು ಸಾವನ್ನಪ್ಪಿವೆ. ಉಳಿದ ನಾಲ್ಕು ಕುರಿಗಳು ಅಪಾಯದಿಂದ ಪಾರಾಗಿವೆ.
ಸ್ಥಳಕ್ಕೆ ಕುರಿ ಉಣ್ಣೆ ಮತ್ತು ಅಭಿವೃದ್ದಿ ನಿಗಮದ ಅನುಷ್ಠಾನಾಧಿಕಾರಿ ಮಧುರನಾಥರೆಡ್ಡಿ, ಪಶು ವೈದ್ಯರಾದ ಡಾ.ಮುನಿನಾರಾಯಣರೆಡ್ಡಿ, ಪ್ರಗತಿ ಪರ ಕುರಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಬಳುವನಹಳ್ಳಿ ಲೊಕೇಶ್, ರವಿಚಂದ್ರ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುರಿಗಳ ಅಂಶಗಳನ್ನು ಕತ್ತರಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿ ಕುರಿಗಳ ಸಾವಿಗೆ ನಿಖರ ಕಾರಣ ತಿಳಿದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು.

error: Content is protected !!