ರಸ್ತೆಯಲ್ಲಿ ಯಾರೂ ಓಡಾಡದಿರಲೆಂದು ರಸ್ತೆಯನ್ನು ಜೆಸಿಬಿಯಿಂದ ಅಗೆದು ಟ್ರಂಚ್ ಮಾಡಿದ್ದು, ಅಕ್ಕಪಕ್ಕದ ರೈತರು ಈ ದಾರಿಯಲ್ಲಿ ಸಂಚರಿಸಲು ಆಗದೆ ತಮ್ಮ ಜಮೀನುಗಳಿಗೆ ಹೋಗಲಾಗದೇ ಪರಿತಪಿಸುವಂತಾಗಿದೆ.
ತಾಲ್ಲೂಕಿನ ಕೊತ್ತನೂರು ಗ್ರಾಮದ ಕಾಲೋನಿಯ ಗೋವಿಂದಪ್ಪ ಅವರ ಮನೆಯಿಂದ ಓಡೇಶನಪಡೆ ಕುಂಟೆ ಹಾಗೂ ಅಲ್ಲಿಂದ ಗೊರಮಡುಗು, ತುಮ್ಮನಹಳ್ಳಿಗೂ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅದೇ ಗ್ರಾಮದ ಕೆಲವರು ಟ್ರಂಚ್ ನಿರ್ಮಿಸಿ ಜನರು ಓಡಾಡದಂತೆ ಮಾಡಿದ್ದಾರೆ ಎಂದು ಕೊತ್ತನೂರು ಕೆ.ಸಿ.ಜ್ಞಾನೇಶ್ ಮುಂತಾದವರು ದೂರಿದ್ದಾರೆ.
ಈ ಹಿಂದೆ ಇಲ್ಲಿ ರಸ್ತೆ ಇತ್ತಾದರೂ ಅಕ್ಕಪಕ್ಕದವರು ಒತ್ತುವರಿ ಮಾಡಿ ರಸ್ತೆ ಇಲ್ಲದಂತೆ ಮಾಡಿದ್ದರು. ನಂತರ ಆ ಭಾಗದ ರೈತರು ದೂರು ಕೊಟ್ಟ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸಿದ್ದರು.
ಆದರೆ ಇದೀಗ ಅದೇ ರಸ್ತೆಯಲ್ಲಿ ಟ್ರಂಚ್ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದು ಅನೇಕ ಮಂದಿಯ ಹೊಲ ತೋಟಗಳಿಗೆ ಹೋಗುವ ದಾರಿಯನ್ನು ಮುಚ್ಚಿದಂತಾಗಿದೆ ಎಂದು ಅಲ್ಲಿನ ರೈತರು ಹಾಗೂ ಗ್ರಾಮಸ್ಥರು ನೋವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಯಪ್ರಕಾಶ್, ಈಗಾಗಲೇ ಓಡಾಡಲು ರಸ್ತೆ ಇದ್ದರೂ ಕೆ.ಸಿ.ಜ್ಞಾನೇಶ್ ಮುಂತಾದವರು ಸರ್ಕಾರದ ಯಾವುದೇ ಆದೇಶ ಹಾಗೂ ಅನುದಾನವಿಲ್ಲದೆ ೧೦೦ ಕ್ಕೂ ಹೆಚ್ಚು ಮರಗಳನ್ನು ಕಡಿದು, ಬೆಲೆ ನಾಶ ಮಾಡಿ ರಸ್ತೆ ಮಾಡಲು ಮುಂದಾಗಿದ್ದರು ಎಂದು ಪ್ರತ್ಯಾರೋಪಿಸಿದ್ದಾರೆ. ಈಗಿರುವ ರಸ್ತೆಯನ್ನೇ ಅಧಿಕೃತಗೊಳಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದು, ಈ ಪ್ರಕರಣ ಜಿಲ್ಲಾಧಿಕಾರಿಯ ನ್ಯಯಾಲಯದಲ್ಲಿದೆ ಎಂದು ತಿಳಿಸಿದ್ದಾರೆ.