Home News ಕ್ರೆಸೆಂಟ್‌ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ

ಕ್ರೆಸೆಂಟ್‌ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ

0

ದಡಾರ ಮತ್ತು ರುಬೆಲ್ಲಾ ರೋಗಗಳು ವೈರಾಣುವಿನಿಂದ ಹರಡುವ ಸೋಂಕು. ಮುಂದುವರಿದ ರಾಷ್ಟ್ರಗಳಲ್ಲಿ ಈ ರೋಗಗಳು ನಿರ್ಮೂಲವಾಗಿದ್ದು, ಮುಂದುವರಿಯುತ್ತಿರುವ ನಮ್ಮಂಥಹ ರಾಷ್ಟ್ರಗಳಲ್ಲಿ ಇನ್ನೂ ಈ ರೋಗ ಮಾರಣಾಂತಿಕವಾಗಿದೆ. ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆಗೆ ಎಲ್ಲರೂ ಸಹಕರಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌ ತಿಳಿಸಿದರು.
ನಗರದ ಕ್ರೆಸೆಂಟ್‌ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಆಸ್ಪತ್ರೆ ಮತ್ತು ಕ್ರೆಸೆಂಟ್‌ ಶಾಲೆಯ ವತಿಯಿಂದ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತೀವ್ರವಾಗಿ ಕಾಡುವ ದಡಾರ ಮತ್ತು ರುಬೆಲ್ಲಾ ರೋಗಗಳ ತಡೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಜಿಲ್ಲೆಯಲ್ಲಿ ಫೆಬ್ರುವರಿ7 ರಿಂದ ಮಾರ್ಚ್‌ 1 ರವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕುವ ವ್ಯವಸ್ಥೆ ಮಾಡಿಕೊಳ್ಳಬೇಕು. ಪೋಲಿಯೋ ನಿರ್ಮೂಲನೆ ಮಾಡಿದಂತೆ ದಡಾರ ಮತ್ತು ರುಬೆಲ್ಲಾ ರೋಗಗಳನ್ನೂ ನಿರ್ಮೂಲನೆ ಮಾಡಬೇಕಿದೆ. ದಡಾರ ಲಸಿಕೆ ಮುಖಾಂತರ ತಡೆಗಟ್ಟಬಹುದಾದ ರೋಗವಾಗಿರುವುದರಿಂದ, ಮಕ್ಕಳಲ್ಲಿ ಲಸಿಕೆ ಹಾಕಿ ರೋಗ ತಡೆಗಟ್ಟುವುದರಲ್ಲಿಯೇ ಜಾಣತನವಿದೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಅಥವಾ ದಡಾರ ಮತ್ತು ರುಬೆಲ್ಲಾ ರೋಗದಿಂದ ಬಳಲಿದ್ದರೂ ಮಕ್ಕಳಿಗೆ ಈ ಲಸಿಕೆಯ ಅಭಿಯಾನದಲ್ಲಿ ಲಸಿಕೆ ಹಾಕತಕ್ಕದ್ದು ಎಂದು ಹೇಳಿದರು.
ಕ್ರೆಸೆಂಟ್‌ ಶಾಲೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಮಾತನಾಡಿ, ದಡಾರ, ಕೆಮ್ಮು ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದರೆ, ರುಬೆಲ್ಲಾದ ಸೋಂಕು ಗಾಳಿ ಮೂಲಕ ದೇಹದ ಒಳಗೆ ಸೇರಿಕೊಳ್ಳುತ್ತದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರು, ಅಪೌಷ್ಟಿಕ ಮತ್ತು ಕಡಿಮೆ ವಿಟಮಿನ್‌ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟುವ ಉದ್ದೇಶದಿಂದ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಮ್ಮ ಶಾಲೆಯ 1,350 ಮಕ್ಕಳಲ್ಲದೆ ಈ ಬಡಾವಣೆ ಹಾಗೂ ಸುತ್ತಮುತ್ತಲಿನ ಶಾಲೆಗೆ ಹೋಗದ ಪುಟ್ಟ ಮಕ್ಕಳ ಪೋಷಕರಿಗೆ ಮಾಹಿತಿ ಲಸಿಕೆ ಹಾಕಿಸಿದ್ದೇವೆ. ಒಟ್ಟಾರೆ 1,500 ಮಕ್ಕಳಿಗೆ ಈ ದಿನ ಲಸಿಕೆ ಹಾಕಿಸುವಲ್ಲಿ ಸಫಲರಾಗಿದ್ದೇವೆ ಎಂದು ನುಡಿದರು.
ಸರ್ಕಾರಿ ಆಸ್ಪತ್ರೆಯ ಡಾ.ವಿಜಯಕುಮಾರ್‌, ಡಾ.ನಿರಂಜನ್‌, ಆರೋಗ್ಯ ಇಲಾಖೆಯ ದಾದಾಪೀರ್‌, ಶಾಲೆಯ ಸಿಬ್ಬಂದಿ ಹಾಜರಿದ್ದರು.

error: Content is protected !!