ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಮಕ್ಕಳು ತಮ್ಮ ನೈಜ ಶಕ್ತಿಯನ್ನು ಕಂಡುಕೊಳ್ಳಲು ಅನುಕೂಲ ಕಲ್ಪಿಸುವುದು ಮತ್ತು ಕಠಿಣ ಪರಿಶ್ರಮಿಗಳಾಗಿ ರೂಪುಗೊಳ್ಳಲು ಅನುಕೂಲ ಕಲ್ಪಿಸಬೇಕು. ಶ್ರೇಷ್ಠತೆಯನ್ನು ಸಾಧಿಸುವ ದಾರಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಿ ಎಂದು ಜಿಲ್ಲಾಧಿಕಾರಿ ಪಿ.ಅನಿರುದ್ಧ್ ಶ್ರವಣ್ ತಿಳಿಸಿದರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ “ಕಲೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ತಮ್ಮ ಮಕ್ಕಳು ಓದಿನಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂಬ ಆಸೆ ಇರುತ್ತದೆ. ಆದರೆ ಅತಿಯಾದ ಒತ್ತಡ ಹೇರುವುದರಿಂದ ಮಗುವಿನ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳನ್ನು ಸ್ವಾವಲಂಬಿ ಹಾಗೂ ಉತ್ತಮ ನಾಗರಿಕರನ್ನಾಗಿಸುವ ಉದ್ದೇಶದಿಂದ ಶಿಕ್ಷಣವನ್ನು ನೀಡಬೇಕು. ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಸಾಮರ್ಥ್ಯ ಹೊಂದಿರುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಚುರುಕಾದವರೆಂದು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಖಲೀಲ್ ಗಿಬ್ರಾನ್ ಹೇಳಿದಂತೆ, “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ನಿಮ್ಮೊಳಗಿಂದ ಬಂದಿರಬಹುದು, ಆದರೆ ನಿಮ್ಮಿಂದ ಅಲ್ಲ, ನೀವು ಅವರ ದೇಹಗಳನ್ನು ರೂಪಿಸಬಹುದು, ಅವರ ಆತ್ಮಗಳನ್ನಲ್ಲ, ಅವರನ್ನು ನಿಮ್ಮಂತೆ ಮಾಡುವುದು ಬೇಡ
ಏಕೆಂದರೆ, ಜೀವನ ಹಿಮ್ಮುಖವಾಗಿ ಹೋಗದು, ನೀವು ಬಿಲ್ಲಿನಂತೆ, ಮಕ್ಕಳು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು” ಎಂಬ ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳು ಪೋಷಕರನ್ನು ಅನುಸರಿಸುತ್ತವೆ. ಹಾಗಾಗಿ ಮಕ್ಕಳು ಟೀವಿ ನೋಡುವುದು ಕಡಿಮೆ ಮಾಡಬೇಕಾದರೆ ಮೊದಲು ಪೋಷಕರು ಅದನ್ನು ಪಾಲಿಸಬೇಕು ಎಂದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಡಾ.ಅಬ್ದುಲ್ ರಜಾಕ್ ಮಾತನಾಡಿ, ಬಹಳಷ್ಟು ಸಂದರ್ಭದಲ್ಲಿ ಅಂಕಗಳಿಕೆ ಆಧಾರದ ಮೇಲೆ ವಿದ್ಯಾರ್ಥಿಗಳ ಬುದ್ಧಿಶಕ್ತಿ ನಿರ್ಧರಿಸಲಾಗುತ್ತದೆ. ಅಂಕ ಗಳಿಕೆ ಒಂದರಿಂದಲೇ ವ್ಯಕ್ತಿಯ ಬುದ್ಧಿಮತ್ತೆ ನಿರ್ಧರಿಸಲಾಗದು. ಆದರೆ ಇಂದು ಅನೇಕ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂದು ಒತ್ತಡ ಹೇರುವುದು ಕಂಡುಬರುತ್ತಿದೆ. ಇದರಿಂದ ಭಯಕ್ಕೊಳಗಾಗುವ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ. ಉತ್ತಮ ಹವ್ಯಾಸಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್, ಕಾರ್ಯದರ್ಶಿ ತಮೀಮ್ ಅನ್ಸಾರಿ, ಡಿ.ಡಿ.ಪಿ.ಐ ಶಿವಣ್ಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ತಹಶೀಲ್ದಾರ್ ಅಜಿತ್ ಕುಮಾರ್ ರೈ, ನಗರಸಭೆ ಆಯುಕ್ತ ವಲಪತಿ, ರವಿಶಂಕರ್, ಕೆ.ಎಸ್.ಎಫ್.ಸಿ ವ್ಯವಸ್ಥಾಪಕ ಬಬಾಸಾಬ್, ಡಾ.ಸತ್ಯನಾರಾಯಣ್ ಹಾಜರಿದ್ದರು.