ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡದಿದ್ದರೆ ಕ್ಷಯ ಮಾರಣಾಂತಿಕ ರೋಗವಾಗಿ ಪರಿಣಮಿಸಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ಷಯರೋಗ ಗುಣಪಡಿಸಬಲ್ಲ ಕಾಯಿಲೆಯಾಗಿದೆ. ಕ್ಷಯರೋಗದ ಬಗ್ಗೆ ಭಯಬೇಡ, ಸಂಪೂರ್ಣ ಚಿಕಿತ್ಸೆಯಿಂದ ರೋಗವನ್ನು ಗುಣಪಡಿಸಲಾಗುವುದು. ಕ್ಷಯರೋಗಕ್ಕೆ ಎಲ್ಲಾ ಡಾಟ್‌ಕೆಂದ್ರಗಳಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ. ಕ್ಷಯರೋಗ ಪತ್ತೆಗೆ ಹೊಸ ಹೊಸ ಸಲಕರಣೆಗಳು ಲಭ್ಯವಿದ್ದು ಅವುಗಳ ಉಪಯೋಗ ಮಾಡುವದರ ಮೂಲಕ ಆದಷ್ಟು ಬೇಗನೆ ಕ್ಷಯರೋಗ ಪತ್ತೆ ಹಚ್ಚಬಹುದು ಎಂದು ಹೇಳಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಕ್ಷಯರೋಗಕ್ಕೆ ನಿಯಮ ಚಿಕಿತ್ಸೆ, ಆಹಾರ ಹಾಗೂ ಸ್ವಚ್ಛತೆಯು ಬಹಳ ಮುಖ್ಯ. ನಿಯಮಿತ ಹಾಗೂ ನಿರಂತರವಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಕ್ಷಯರೋಗದಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ. ಕ್ಷಯರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದಾದರೂ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಕ್ಷಯರೋಗ(ಟಿಬಿ) ಎಂದರೆ ಹಿಂದೆ ಭಯಪಡುವ ವಾತಾವರಣವಿತ್ತು. ಆದರೆ ಇಂದು ವೈದ್ಯಕೀಯ ಜಗತ್ತಿನಲ್ಲಿ ಆಗಿರುವ ಮಹತ್ತರ ಬದಲಾವಣೆಯಿಂದಾಗಿ ಗುಣಪಡಿಸುವ ಸಾಮರ್ಥ್ಯ ಮತ್ತು ಔಷಧಿ ಇದೆ ಎಂದು ಅವರು ಹೇಳಿದರು.
ಆಶಾ ಕಾರ್ಯಕರ್ತೆಯರು ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ವೈದ್ಯರಾದ ಡಾ.ಸುನೀತಾ, ಡಾ.ಹೇಮಂತ್‌ಕುಮಾರ್, ಡಾ.ವಿಜಯ್‌ಕುಮಾರ್, ಹಿರಿಯ ಚಿಕಿತ್ಸ ಮೇಲ್ವಿಚಾರಕ ನರಸಿಂಹಮೂರ್ತಿ, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.