ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಕಾಡುತ್ತಿದ್ದು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹ ಕಷ್ಟಕರವಾದ ಸ್ಥಿತಿ ಉದ್ಭವವಾಗಿದೆ. ಮುಂಬರುವ ಮೂರು ತಿಂಗಳ ಕಾಲ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಸಲು ರೈತರು ಹಾಗೂ ನಾಗರಿಕರು ಸಹಕರಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಕೋರ್ಟ್ ಆವರಣದ ಮುಂಭಾಗದಿಂದ ಹನುಮಂತಪುರ ಗ್ರಾಮದ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಕೊರೆಯಿಸಿರುವ ನೂರಾರು ಕೊಳವೆಬಾವಿಗಳು ನೀರಿಲ್ಲದೆ ವಿಫಲವಾಗಿವೆ. ಹಲವೆಡೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಪೂರೈಕೆ ಮಾಡುತ್ತಿದ್ದರೂ ನೀರಿನ ಅಭಾವ ನೀಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರು ದೊಡ್ಡಮನಸ್ಸು ಮಾಡಿ ಮುಂದಿನ ೩ ತಿಂಗಳ ಕಾಲ ಕುಡಿಯಲಿಕ್ಕೆ ನೀರು ಪೂರೈಕೆ ಮಾಡಿ ಸಹಕಾರ ನೀಡಬೇಕು ಎಂದರು.
ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ತಾಲ್ಲೂಕಿನಾದ್ಯಂತ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿವೆ. ಲೊಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿರುವ ೪೨ ಕೋಟಿ ರೂ ಅನುಧಾನದಲ್ಲಿ ರಸ್ತೆ ಕಾಮಗಾರಿಗಳ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ ೭೦ ರಷ್ಟು ಸ್ವಚ್ಚತೆ ಕಾಪಾಡಲು ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ ಎಂದರು.
ಲೊಕೋಪಯೋಗಿ ಇಲಾಖೆ ಎಇಇ ಕೆ.ಎಂ.ವಿನೋದ್, ಪೌರಾಯುಕ್ತ ಚಲಪತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಅಮ್ಜದ್‌ಪಾಷ, ಕೃಷ್ಣಮೂರ್ತಿ, ನಾಗನರಸಿಂಹ, ರಾಜ್‌ಕುಮಾರ್, ಶ್ರೀನಾಥ್ ಹಾಜರಿದ್ದರು.