ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಪ್ರಕಾರ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವುದು ಮತ್ತು ತಮ್ಮ ವಿದ್ಯಾರ್ಹತೆಗನುಗುಣವಾಗಿ ಚಿಕಿತ್ಸೆ ನೀಡಬೇಕು. ಹೋಮಯೋಪತಿ, ಆಯುಷ್, ಆಯುರ್ವೇದದ ಪದವಿ ಪಡೆದು ಆಲೋಪಥಿ ಓಷಧಿಗಳನ್ನು ಬಳಸಿ ಜನತೆಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ನೇತೃತ್ವದ ತಂಡದೊಂದಿಗೆ ನಗರದ ಕೆಲ ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಗರದ ಅಶೋಕ ರಸ್ತೆಯ ಮಾಡ್ರನ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ವೈದ್ಯರ ಪದವಿ ಪ್ರಮಾಣ ಪತ್ರ ಹಾಗೂ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋದಣಿಯಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಹೋಮಿಯೋಪಥಿ ಪ್ರಮಾಣ ಪತ್ರ ಪಡೆದಿರುವ ವೈದ್ಯ ಆಲೋಪಥಿ ಓಷಧಿ ಬಳಸಿ ಚಿಕಿತ್ಸೆ ನೀಡುತ್ತಿದ್ದುದನ್ನು ಕಂಡು, ಮುಂದೆ ಈ ರೀತಿ ಮಾಡದಂತೆ ಎಚ್ಚರಿಸಿ ತಿಳುವಳಿಕೆ ನೊಟೀಸ್ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮಾತನಾಡಿ, ನಗರದಾದ್ಯಂತ ಸುಮಾರು 20 ಕ್ಕೂ ಹೆಚ್ಚು ಮಂದಿ ಆಯುಷ್. ಹೋಮಿಯೋಪಥಿ ಹಾಗೂ ಆಯುರ್ವೇದ ಪದವಿ ಪಡೆದಿರುವ ವೈದ್ಯರು ಆಲೋಪಥಿ ಓಷಧಿ ಬಳಸಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ನಾಗರಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಇಂದು ಸಾಂಕೇತಿಕವಾಗಿ ದಾಳಿ ನಡೆಸಿ ತಿಳುವಳಿಕೆ ಮೂಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಹಾಬುದ್ದೀನ್, ಡಾ.ಚನ್ನಕೇಶವರೆಡ್ಡಿ ಹಾಜರಿದ್ದರು.