ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ನಾಂದಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಸಹಾಯಕ ಮಹಾ ಪ್ರಬಂಧಕ ಜೀತೇಂದ್ರರಾವ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಕೆನರಾ ಬ್ಯಾಂಕ್ ಮೇಲೂರು ಹಾಗೂ ನಬಾರ್ಡ್ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರತಿಯೊಂದು ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ನಾಗರಿಕರು, ಬ್ಯಾಂಕುಗಳೊಂದಿಗೆ ನಿರಂತರವಾದ ಸಂಪರ್ಕವಿಟ್ಟುಕೊಂಡು, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕೇಂದ್ರ ಸರ್ಕಾರದ ಮಹತ್ತರವಾದ ಯೋಜನೆಯಾದ ಜನಧನ ಯೋಜನೆಯ ಮೂಲಕ ತಮ್ಮ ಉಳಿತಾಯವನ್ನು ಹೂಡಿಕೆ ಮಾಡುವ ಮೂಲಕ ಸ್ಥಳೀಯ ಬ್ಯಾಂಕುಗಳನ್ನು ರಕ್ಷಣೆ ಮಾಡುವುದರ ಜೊತೆಗೆ ನಾಗರೀಕರು ತಮ್ಮ ಜೀವನದ ಮಟ್ಟವನ್ನು ಏರಿಕೆ ಮಾಡಿಕೊಳ್ಳಬೇಕು, ಬ್ಯಾಂಕುಗಳಿಂದ ಪಡೆದುಕೊಂಡಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಉಳಿವಿಗಾಗಿ ಶ್ರಮಿಸಬೇಕು ಎಂದರು.
ಜಿಲ್ಲಾ ಆರ್ಥಿಕ ಸಾಕ್ಷರತಾ ಸಲಹೆಗಾರ ಬೆಳಂಕರ್ ಮಾತನಾಡಿ, ಸ್ಥಳೀಯವಾಗಿರುವ ಬ್ಯಾಂಕು ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಉತ್ತಮವಾದ ಸಂಪರ್ಕವನ್ನು ಇಟ್ಟುಕೊಂಡು, ಸಿಗುವಂತಹ ಸೌಲಭ್ಯಗಳ ಉಪಯೋಗ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವೂ ಸೇರಿದಂತೆ ಕೃಷಿ, ತೋಟಗಾರಿಕೆ, ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಾಲ, ಸೇರಿದಂತೆ ಅನೇಕ ಉದ್ದೇಶಗಳಿಗೆ ಸಾಲಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ್, ಮೇಲೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕಿ ಇಂದು ಎಚ್.ಪಾಟೀಲ್, ಕ್ಷೇತ್ರಾಭಿವೃದ್ಧಿ ಅಧಿಕಾರಿ ಯುವರಾಜ್ಕುಮಾರ್, ಡಿಂಕು ಖ್ಯಾತಿಯ ಇಂದುಶ್ರೀ, ಮೇಲೂರು ಕೆನರಾ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.