ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಮಕ್ಕಳನ್ನು ಸನ್ನದ್ದುಗೊಳಿಸುವಲ್ಲಿ ವಿದ್ಯಾ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ತಾಪಂ ಸದಸ್ಯ ಬಿ.ವಿ. ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಬಳಿ ನಿರ್ಮಿಸಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ವಿದ್ಯಾ ಸಂಸ್ಥೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ಮಕ್ಕಳಿಗೆ ಸಿಗುವ ಉನ್ನತ ಸೌಲಭ್ಯಗಳುಳ್ಳ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗಿರುವ ವಿದ್ಯಾ ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯ. ಅಲ್ಲದೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿಟ್ಟುಕೊಂಡು ಶುಲ್ಕವನ್ನು ಕಡಿಮೆ ಮಾಡುವ ಮನಸ್ಸು ಮಾಡಿರುವುದು ಕೂಡ ಇತರರಿಗೆ ಮಾದರಿಯಾಗಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಮಹದಾಸೆಯೊಂದಿಗೆ ಪ್ರಾರಂಭಿಸಿರುವ ವಿದ್ಯಾ ಸಂಸ್ಥೆಯ ಧ್ಯೇಯೋದ್ದೇಶಗಳು ಸಫಲವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಾಗಂಗಾಧರ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವೆಂಕಟೇಶಪ್ಪ, ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ್, ಗ್ರಾಮದ ಮುಖಂಡರಾದ ದ್ಯಾವಪ್ಪ, ರಾಮಸ್ವಾಮಿ, ಶಿವರಾಮರೆಡ್ಡಿ, ಸಾಯಿ ಇಚಿಟರ್ ನ್ಯಾಷನಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ದೀಪಾಮಂಜುನಾಥ್, ಕಾರ್ಯದರ್ಶಿ ಎಂ. ಮಂಜುನಾಥ್, ಗವಿಗಾನಹಳ್ಳಿ ಮುನಿಶಾಮೇಗೌಡ, ಶಿಕ್ಷಕ ಶಿವಕುಮಾರ್, ಪಿಡಿಒ ಅಶೋಕ್, ಆರ್‌ಐ ನರಸಿಂಹಮೂರ್ತಿ, ದೇವರಾಜ್, ಸೊಪ್ಪಹಳ್ಳಿ ಮೂರ್ತಿ ಹಾಜರಿದ್ದರು.