Home News ಗ್ರಾಮೀಣ ಶಿಬಿರದಲ್ಲಿ ಭಾಗವಹಿಸಿರುವ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು

ಗ್ರಾಮೀಣ ಶಿಬಿರದಲ್ಲಿ ಭಾಗವಹಿಸಿರುವ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು

0

ತಾಲ್ಲೂಕಿನ ಗಾಂಡ್ಲಚಿಂತೆ ಶಾಲೆಯಲ್ಲಿ ಶನಿವಾರ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ದರ್ಶನವಾಗಿತ್ತು. ಬೆಂಗಳೂರಿನ ಸೆಂಟ್‌ ಜೋಸೆಫ್‌ ಕಾಲೇಜಿನ ದ್ವಿತೀಯ ವರ್ಷದ ಬಿಎಸ್‌ಡಬ್ಲೂ ವಿದ್ಯಾರ್ಥಿಗಳು ಹತ್ತು ದಿನಗಳ ಗ್ರಾಮೀಣ ಶಿಬಿರಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದು, ಶಾಲಾ ವಿದ್ಯಾರ್ಥಿಗಳ ಮುಂದೆ ಅವರು ತಮ್ಮ ಮೂಲ ನೆಲೆಗಳ ಬಗ್ಗೆ ವಿವರಿಸಿ ವಿವಿಧ ರಾಜ್ಯಗಳ ಪರಿಚಯವನ್ನು ಮಾಡಿಕೊಟ್ಟರು.
ಬಿ ಎಸ್‌ ಡಬ್ಲೂ ವಿದ್ಯಾರ್ಥಿಗಳಲ್ಲಿ ಸಿಕ್ಕಿಂ, ಕೇರಳ, ಕರ್ನಾಟಕ, ತಮಿಳುನಾಡು, ಅರುಣಾಚಲ ಪ್ರದೇಶ, ಡಾರ್ಜಲಿಂಗ್‌, ಅಸ್ಸಾಂ, ನಾಗಾಲ್ಯಾಂಡ್‌, ಬಾಂಬೆ, ಆಂಧ್ರಪ್ರದೇಶವಲ್ಲದೆ, ನೆರೆಯ ರಾಷ್ಟ್ರಗಳಾದ ಟಿಬೆಟ್‌, ನೇಪಾಳದ ಮೂಲದವರು ಇದ್ದಾರೆ. 22 ಮಂದಿ ಗಂಡು ವಿದ್ಯಾರ್ಥಿಗಳು ಮತ್ತು 12 ಮಂದಿ ಹೆಣ್ಣು ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರೊಂದಿಗೆ ಶಾಲೆಯಲ್ಲಿಯೇ ತಂಗಿದ್ದಾರೆ.

ಶಿಬಿರದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವ ವಿದ್ಯಾರ್ಥಿ.
ಶಿಬಿರದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವ ವಿದ್ಯಾರ್ಥಿ.

‘ಬೆಳಿಗ್ಗೆ 5.30 ರಿಂದ ತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವ ಈ ಶಿಬಿರಾರ್ಥಿಗಳು ಗಂಡ್ಲಚಿಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿ ಮನೆಗೂ ತೆರಳಿ ಜನಜೀವನ, ಆಹಾರಪದ್ಧತಿ, ಉಡುಗೆ ತೊಡುಗೆ, ಆದಾಯ ಮೂಲಗಳು, ಸರ್ಕಾರಿ ಸೌಲಭ್ಯಗಳು, ಕೂಲಿ ಕಾರ್ಮಿಕರು, ಅಂಗವಿಕಲರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಜೊತೆಯಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವ ಶಿಬಿರಾರ್ಥಿಗಳು ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್‌, ಗ್ರಾಮಕ್ಕೆ ನಾಮಫಲಕ, ಶಾಲೆಗೆ ಕೊಕೋ ಮತ್ತು ವಾಲಿಬಾಲ್‌ ಕೋರ್ಟ್‌ ರೂಪಿಸಿಕೊಡುತ್ತಿದ್ದಾರೆ.
ಸಂಜೆವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಗ್ರಾಮದಲ್ಲಿ ವಿಶಿಷ್ಠ ಹಬ್ಬದ ವಾತಾವರಣವನ್ನು ಸೃಷ್ಠಿಸಿದ್ದಾರೆ. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ, ಏರೋಬಿಕ್‌, ಬಾಂಗ್ಡಾ, ವಿವಿಧ ಅಭಿನಯಗೀತೆಗಳನ್ನು ಕಲಿಸುತ್ತಿದ್ದೇನೆ’ ಎಂದು ಸಂಪನ್ಮೂಲ ಶಿಕ್ಷಕ ಸೇವಾದಳ ವೆಂಕಟರೆಡ್ಡಿ ತಿಳಿಸಿದರು.
ಶಿಬಿರದ ಸಂಘಟಕರಾದ ಡಿ. ಅಕ್ಷಯ್‌ ಮಾಂಡ್ಲಿಕ್‌, ವಿಯೋಲಾ, ಶಾಲಾ ಮುಖ್ಯ ಶಿಕ್ಷಕ ಎಸ್‌.ಎಂ.ಆದಿನಾರಾಯಣ, ಶಿಕ್ಷಕರಾದ ನಾಗೇಶ್‌, ಶ್ರೀನಿವಾಸ್‌, ರಾಮರೆಡ್ಡಿ, ವಾಣಿ, ಲಲಿತ ಹಾಜರಿದ್ದರು.

error: Content is protected !!