ತಾಲ್ಲೂಕಿನ ಮೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಸಮುದಾಯಭವನದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ನಾಲ್ಕನೇ ತಾಲ್ಲೂಕು ಸಮ್ಮೇಳನದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ೩೪೬ ಗ್ರಾಮ ಪಂಚಾಯಿತಿ ನೌಕರರಿಗೂ ಗುರುತಿನ ಚೀಟಿಯನ್ನು ನೀಡಿದ್ದು, ಪ್ರತಿಯೊಬ್ಬ ನೌಕರರ ಸೇವಾ ಪುಸ್ತಕವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ನೌಕರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಗ್ರಾಮಗಳಲ್ಲಿ ರಾಜಕೀಯದಲ್ಲಿ ಭಾಗಿಯಾಗದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಇ.ಎಫ್.ಎಂ.ಎಸ್ ಮೂಲಕ ಸರ್ಕಾರಿ ನೌಕರರಿಗೆ ವೇತನವಾಗುವಂತೆ ನೇರವಾಗಿ ಖಾತೆಗೆ ಸಂಬಳ ಜಮಾ ಆಗುವ ವ್ಯವಸ್ಥೆಗೆ ಇ.ಒ ಅನುಮೋದನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ೨೦೧೮ ರಿಂದ ೨೦೨೧ ರವರೆಗೆ ಗ್ರಾಮ ಪಂಚಾಯಿತಿ ನೌಕರರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿರುವುದು ಮಾದರಿಯಾಗಿದೆ ಎಂದರು.
ಜಿಲ್ಲಾ ಸಿ.ಪಿ.ಐ.ಎಂ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುನಿಕೃಷ್ಣಪ್ಪ ಮಾತನಾಡಿ. ಗ್ರಾಮ ಪಂಚಾಯಿತಿ ನೌಕರರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಸ್ಯೆಗಳು ಪರಿಹಾರವಾಗುತ್ತವೆ. ಒಬ್ಬರಿಗೊಬ್ಬರು ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಪಲಿಚೇರ್ಲು ಪಿಡಿಒ ಕಾತ್ಯಾಯಿನಿ, ಮೇಲೂರು ಪಿಡಿಒ ಕೆ.ವಿ.ಶಾರದಾ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.