ಗ್ರಾಮೀಣ ಯುವಕರಲ್ಲಿ ಕನ್ನಡ ನಾಡು ನುಡಿಯ ಪ್ರೇಮ ಹಾಗೂ ಸಾಮಾಜಿಕ ಕಳಕಳಿಯಿರುವುದು ಶುಭ ಸೂಚಕ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬೈರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ನೇತಾಜಿ ಕನ್ನಡ ಕಲಾ ಯುವಕರ ಸಂಘ ಹಾಗೂ ಕನ್ನಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಈಚೆಗೆ ನಡೆದ ಆರನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಹಲವು ಅನುಕೂಲಗಳಿವೆ, ಹಾಗೆಯೇ ತೊಂದರೆ ಮತ್ತು ನ್ಯೂನತೆಗಳೂ ಇವೆ. ಯುವಜನರು ಒಗ್ಗೂಡಿ ಸಮಸ್ಯೆಗಳನ್ನು ಬಗೆಹರಿಸಿ ಸವಾಲುಗಳನ್ನು ಎದುರಿಸುವಂತಾಗಲಿ. ಇದು ಕೂಡ ಕನ್ನಡದ ಸೇವೆಯೇ ಎಂದು ಹೇಳಿದರು.
ಗ್ರಾಮದ ದಿ. ಶೇಕರಣ್ಣ ಮತ್ತು ದಿ. ಶಂಕರಣ್ಣನವರ ಜ್ಞಾಪಕಾರರ್ಥವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು .65 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತರಾದ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ ಅವರನ್ನು ಪುರಸ್ಕರಿಸಲಾಯಿತು.
ಯುವ ಶಕ್ತಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯಬಾವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ತಾಲೂಕು ಪಂಚಾಯಿತಿ ಸದಸ್ಯ ಎಂ.ಕೆ. ರಾಜಶೇಖರ್, ಬಿ ಬೈರೇಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿರಾಜು, ನವೀನ್ ಕುಮಾರ್, ಅಭಿರಾಮ್ ಗೌಡ, ಶಿವು, ರಮೇಶ್, ಸಂತೋಷ ಹಾಜರಿದ್ದರು.