ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಸ್ವಚ್ಛತಾ ದಿನ’ವನ್ನು ಆಚರಿಸುತ್ತಿದ್ದು, ನಮ್ಮ ಹಂಡಿಗನಾಳ ಪಂಚಾಯಿತಿಯ ಎಲ್ಲಾ ಹನ್ನೊಂದು ಗ್ರಾಮಗಳಲ್ಲಿ ಇಂದು ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್‌ಕುಮಾರ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗುರುವಾರ ಚರಂಡಿ ಸ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸೋಪು ಹಾಕಿ ಕೈ ತೊಳೆಯುವ ಮೂಲಕ ಸ್ವಚ್ಛತೆಯ ಪಾಠ ಹೇಳಿ ಪ್ರಾರಂಭಿಸಿದೆವು. ಶಾಲೆಯ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಗ್ರಾಮದಲ್ಲಿ ಜಾಥಾ ನಡೆಸಿ ಗ್ರಾಮ ಸ್ವಚ್ಛತೆ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಜಾಗೃತಿಯನ್ನು ಮೂಡಿಸಿದೆವು.
ನಮ್ಮ ಪಂಚಾಯಿತಿಯಲ್ಲಿ ವಿವಿದೆಡೆ ಇರುವ ಓವರ್ ಹೆಡ್ ಟ್ಯಾಂಕ್ ಹಾಗೂ ಸಿಸ್ಟನ್‌ಗಳ ಸ್ಚಚ್ಛತೆ ಕಾರ್ಯವನ್ನೂ ನಡೆಸಿದ್ದೇವೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಫೆನಾಯಿಲ್ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿದ್ದೇವೆ. ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ. ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ, ತಮ್ಮ ಊರು, ಗ್ರಾಮವನ್ನು ಸ್ವಚ್ಛಗೊಳಿಸುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಶುಭ ಸೂಚಕವಾಗಿದೆ. ನಮ್ಮ ಗ್ರಾಮ ಪಂಚಾಯಿತಿಯೂ ಇದಕ್ಕೆ ಹೊರತಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಶ್ರೀನಿವಾಸ್, ಸಂಪತ್, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಭಾರತಿ, ಹಾಜರಿದ್ದರು.