ನಗರದ ವೇಣುಗೋಪಲಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ “ಅಪಘಾತ ಜೀವ ರಕ್ಷಕ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ” ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ನಾಯಕ್ ಮಾತನಾಡಿದರು.
ಅಪಘಾರ ಸಂಭವಿಸಿದ ಮೊದಲ ೬೦ ನಿಮಿಷಗಳು ಸುವರ್ಣ ಅವಧಿಯಾಗಿದ್ದು, ಆ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ ಜೀವಗಳನ್ನು ರಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಈ ಕಿಟ್ ಸಹಕಾರಿಯಾಗಲಿದೆ. ಯಾವುದೇ ಸಂದರ್ಭದ ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಕಿಟ್‍ನಲ್ಲಿರುವ ಔಷಧಿಗಳನ್ನು ಬಳಸಿ ಪ್ರಥಮ ಹಂತದ ಚಿಕಿತ್ಸೆ ನೀಡಿದ ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮಂಡಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಎರಡು ಸಾವಿರ ರೂ ಬೆಲೆಯ ಈ ಕಿಟ್ ಉಚಿತವಾಗಿ ನೀಡಲಾಗುತ್ತಿದೆ. ಈ ಕಿಟ್‍ನ್ನು ಎಲ್ಲಾ ವಾಹನ ಚಾಲಕರು ಬಳಸಬೇಕು. ತಮ್ಮ ವಾಹನದಲ್ಲಿ ಮುಂಜಾಗೃತವಾಗಿ ಈ ಕಿಟ್ ಇಟ್ಟಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸೋಮಶೇಖರ್ ಮಾತನಾಡಿ, ಕಾರ್ಮಿಕ ಇಲಾಖೆಯ ವತಿಯಿಂದ ಈ ದಿನ ಭಾಗವಹಿಸಿರುವ ಚಾಲಕರಿಗೆ ೩೫೦ ರೂ ಸಂಭಾವನೆ ನೀಡಲಾಗುತ್ತಿದೆ. ಚಾಲಕರಿಗೆ ಕಾರ್ಮಿಕ ಇಲಾಖೆಯಿಂದ ಅಪಘಾತ ವಿಮೆ ಸೌಲಭ್ಯವನ್ನು ಕೂಡ ಒದಗಿಸಿದೆ. ಕೈಕಾಲು ಊನವಾದಲ್ಲಿ ೨ ಲಕ್ಷ ರೂ, ಪ್ರಾಣಾಪಾಯ ಸಂಭವಿಸಿದಲ್ಲಿ ಕುಟುಂಬದವರಿಗೆ ೫ ಲಕ್ಷ ರೂ ಹಾಗೂ ಮೃತರ ಇಬ್ಬರು ಮಕ್ಕಳಿಗೆ ಎಸ್ ಎಸ್ ಎಲ್ ಸಿ ವರೆಗೂ ವಾರ್ಷಿಕ ೧೦ ಸಾವಿರ ರೂ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೧೨೦ ಮಂದಿ ಚಾಲಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಯಿತು.
ಕಾರ್ಮಿಕ ನಿರೀಕ್ಷಕಿ ಜೆ.ವಿ.ಕಲಾವಾಣಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಭರತ್ ಹಾಜರಿದ್ದರು.