Home News ಚಿಕ್ಕಬಳ್ಳಾಪುರ ಜಿಲ್ಲೆಯು ಅಭಿವೃದ್ಧಿಯಲ್ಲಿ ‘ದೀಪದ ಕೆಳಗೆ ಕತ್ತಲೆ’ಯಂತಿದೆ

ಚಿಕ್ಕಬಳ್ಳಾಪುರ ಜಿಲ್ಲೆಯು ಅಭಿವೃದ್ಧಿಯಲ್ಲಿ ‘ದೀಪದ ಕೆಳಗೆ ಕತ್ತಲೆ’ಯಂತಿದೆ

0

‘ದೀಪದ ಕೆಳಗೆ ಕತ್ತಲೆ’ ಎಂಬಂತಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ. ರೈತರು, ರೇಷ್ಮೆ ಬೆಳೆಗಾರರು, ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೀಡಿದ ಮನವಿಪತ್ರಗಳು ಈ ಭಾಗದ ಸಮಸ್ಯೆಗಳನ್ನು ತೋರಿಸುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಅಭಿನಂದನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಭಾಗದ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಾರೋ ಇಲ್ಲವೋ ನಾನಂತೂ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ, ಸಂಸತ್ನಲ್ಲಿ ದನಿಯೆತ್ತುತ್ತೇನೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಗ್ರಾಮೀಣಾಭಿವೃದ್ಧಿಯ ಕೊರತೆ, ರೈತರಿಗೆ ಸಿಗಬೇಕಾದ ಸೌಲಭ್ಯದ ಕೊರತೆ ಎಲ್ಲವೂ ಕಣ್ಣು ಮುಂದೆ ಗೋಚರಿಸುತ್ತಿದೆ. ನೀರಿಗಾಗಿ ಎಷ್ಟು ವರ್ಷ ಕಾಯುತ್ತೀರಿ, ಫ್ಲೋರೈಡ್ ನೀರು ಸೇವಿಸಿ ನಿಮ್ಮ ಧ್ವನಿಯೂ ಉಡುಗಿಹೋಗಿಲ್ಲವೆ ಎಂದು ಪ್ರಶ್ನಿಸಿದರು.
ಮೂಗಿನ ಮೇಲೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ಬಯಲು ಸೀಮೆಗೆ ನೀರು ತರುವ ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಹಲವಾರು ಬ್ರಷ್ಟಾಚಾರ ನಡೆಸಿದೆ. ಪೈಪ್ ಲೈನ್ ಖರೀದಿಯ ನೆಪದಲ್ಲಿ 4000 ಕೋಟಿ ರೂಗಳ ಅವ್ಯವಹಾರ ನಡೆದಿದೆ. ಮೂರು ವರ್ಷ ಕಳೆದರೂ ನಿಮಗೆ ನೀರು ಸಿಗುವ ಭರವಸೆ ಕೊಂಚವೂ ಮೂಡಿಲ್ಲ. ರಾಜ್ಯದಲ್ಲಿ ಭಗವಂತ ನೀಡಿರುವ ನದಿಗಳ ಮೇಲ್ಮೈ ನೀರನ್ನು ಸಮರ್ಪಕವಾಗಿ ಕೊಡುವ ಕೆಲಸ ಸರ್ಕಾರ ಮಾಡಿಲ್ಲ. ಯಡಿಯೂರಪ್ಪನವರು ಆರಂಭಿಸಿದ್ದ ಭಾಗ್ಯಲಕ್ಷ್ಮ ಯೋಜನೆ, ಹಾಲಿಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಯೆಂದು ಪ್ರಾರಂಭಿಸಿ ಮೊದಲು 30 ಕೆಜಿ ಅಕ್ಕಿ ಕೊಟ್ಟ ರಾಜ್ಯ ಸರ್ಕಾರ ಈಗ 3 ಕೆಜಿ ಅಕ್ಕಿಗೆ ಸೀಮಿತವಾಗಿದೆ. ಕೇಂದ್ರ ಸರ್ಕಾರ ಒಂದು ಲಕ್ಷ 67 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಒಂದು ಕೆಜಿಗೆ 32 ರೂಗಳಿಗೆ ಖರೀದಿಸಿ 3 ರೂಗಳಿಗೆ ನಮ್ಮ ರಾಜ್ಯಕ್ಕೆ ಪ್ರತಿ ತಿಂಗಳೂ ನೀಡುತ್ತಿದೆ. ಗೋದಿಯನ್ನು ಒಂದು ಕೆಜಿಗೆ 22 ರೂಗಳಿಗೆ ಖರೀದಿಸಿ 2 ರೂಗಳಿಗೆ 57 ಸಾವಿರ ಮೆಟ್ರಿಕ್ ಟನ್ನೀಡುತ್ತಿದೆ. ಭ್ರಷ್ಟ ಅಧಿಕಾರಿಗಳಿಂದ ಇವೆಲ್ಲವೂ ಅಕ್ರಮವಾಗಿ ಪರರಾಜ್ಯಗಳಿಗೆ ಹೋಗುತ್ತಿವೆ. ಬರಗಾಲಕ್ಕಾಗಿ ಕೇಂದ್ರ ಸರ್ಕಾರ ನೀಡಿದ 1,520 ಕೋಟಿ ರೂಗಳಿಗೆ ರಾಜ್ಯ ಸರ್ಕಾರವೂ ಸೇರಿಸಿ ತೊಂದರೆಗೊಳಗಾದವರಿಗೆ ವಿತರಿಸಬೇಕಿತ್ತು. ಆದರೆ ಅದು ಆಗಿಲ್ಲ. ಕೇಂದ್ರದಿಂದ ಗ್ರಾಮೀಣಾಭಿವೃದ್ಧಿಗಾಗಿ ಬರುವ ಸದುಪಯೋಗವಾಗುತ್ತಿಲ್ಲ. ಈ ಬಗ್ಗೆ ತನಿಖೆಯಾದಾಗ ಜನರಿಗೆ ಸತ್ಯಾಂಶ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇಂಧನ ಖಾತೆಯನ್ನು ವಹಿಸಿದ್ದಾಗ ಕೇಂದ್ರದ ಯುಪಿಎ ಸರ್ಕಾರ ಸಹಾಯ ಮಾಡಲಿಲ್ಲ, ಕಲ್ಲಿದ್ದಲೂ ಸಹ ನೀಡಲಿಲ್ಲ. ಬೇರೆ ರಾಜ್ಯಗಳಲ್ಲಿ ಕಾಡಿಬೇಡಿ ವಿದ್ಯುತ್ ತಂದು ನಮ್ಮ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡೆ. ಆದರೆ ಈಗ ಕೇಂದ್ರ ಸರ್ಕಾರ ಕನಿಷ್ಠ ಹಣ ನೀಡಿ ವಿದ್ಯುತ್ ಕೊರತೆಯಿರುವ ರಾಜ್ಯಗಳು ವಿದ್ಯುತ್ ಖರೀದಿಸಬಹುದು ಎಂದು ಅಧಿಕೃತವಾಗಿ ಘೋಷಿಸಿದ್ದರೂ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ರೈತರಿಗೆ ಬವಣೆ ತಪ್ಪಿಲ್ಲ. ರೈತರ ಬಗ್ಗೆ, ಮಹಿಳೆಯರ ಬಗ್ಗೆ, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಜನರು, ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ಇಲ್ಲದ ರಾಜ್ಯ ಸರ್ಕಾರದ ಕುರಿತಂತೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ಮಾತನಾಡಿ, ಅಲ್ಪಸಂಖ್ಯಾತರ ರಕ್ತದಲ್ಲಿ ಕಾಂಗ್ರೆಸ್ ‘ಬಿಜೆಪಿ ಕೋಮುವಾದಿ’ ಎಂಬ ವಿಷ ತುಂಬಿದ್ದಾರೆ. ಜಾತಿಯನ್ನು ಮೀರಿ ಮನುಷ್ಯತ್ವದ ನೆಲೆಯಲ್ಲಿ ಯೋಜನೆಗಳನ್ನು ನೀಡಿದ್ದು ಯಡಿಯೂರಪ್ಪನವರ ಸರ್ಕಾರ. ಬಿಜೆಪಿ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕಗಳ ಜವಾಬ್ದಾರಿ ಈಗ ಹೆಚ್ಚಿದೆ. ಜನರಲ್ಲಿ ಪ್ರೀತಿವಿಶ್ವಾಸ ತುಂಬಿ, ಮುಂದಿನ ಒಂದೂ ಮುಕ್ಕಾಲು ವರ್ಷವನ್ನು ದೇಶಕ್ಕೋಸ್ಕರ ಕಾರ್ಯಕರ್ತರು ಮೀಸಲಿಡಿ ಎಂದು ಸಲಹೆ ನೀಡಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ನೂತನ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಅವರಿಗೆ ಬಿಜೆಪಿ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರವನ್ನು ಬಿಜೆಪಿ ಮುಖಂಡರು ಮಾಡಿದರು.
ವಿಧಾನ ಪರಿಷತ್ ಸದಸ್ಯ ವೀರಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜ್ಯೋತಿರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ತರಬಳ್ಳಿ ಭಾಸ್ಕರರೆಡ್ಡಿ, ಮುನಿರಾಜು, ಸುರೇಂದ್ರಗೌಡ, ಶಿವಶಂಕರ್, ತಮ್ಮೇಶ್ಗೌಡ, ಶ್ರೀರಾಮರೆಡ್ಡಿ, ಗೋಪಿನಾಥ್, ಕಮರುದ್ದೀನ್, ರಾಮಲಿಂಗಪ್ಪ, ರವಿನಾರಾಯಣರೆಡ್ಡಿ, ಎಚ್.ಸುರೇಶ್, ದೊಣ್ಣಹಳ್ಳಿ ರಾಮಣ್ಣ, ರಾಘವೇಂದ್ರ, ರಮೇಶ್ ಬಾಯಿರಿ, ಸುಜಾತಮ್ಮ, ಮಂಜುಳಮ್ಮ, ಮುನಿವೆಂಕಟಪ್ಪ, ಲೋಕೇಶ್ಗೌಡ, ಸದಾಶಿವ, ಕೆಂಪರೆಡ್ಡಿ, ಲೀಲಾಭೂಷಣ್, ಶ್ರೀಧರ್, ಅಶ್ವಾಕ್ ಅಹ್ಮದ್, ಚಂದ್ರಪ್ಪ, ಶೋಭಾ, ನಿರ್ಮಲ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮನವಿಗಳು: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಬರಪೀಡಿತ ಜಿಲ್ಲೆಗಳ ರೈತಾಪಿ ವರ್ಗದವರ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.
ಚಿಂತಾಮಣಿಯ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೇಮಕಾತಿಯ ಕುರಿತಂತೆ ತಮ್ಮ ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರು ರೇಷ್ಮೆಯನ್ನು ಜಿ ಎಸ್ ಟಿಗೆ ಸೇರಿಸದಂತೆ ಹಾಗೂ ಇನ್ನಿತರೆ ಸಮಸ್ಯೆಗಳ ಪರಿಹಾರ ಕೋರಿ ಮನವಿ ಸಲ್ಲಿಸಿದರು.