ಜನಸಂಖ್ಯೆ ಹೆಚ್ಚಳದ ದುಶ್ಪರಿಣಾಮಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲರಿಗೂ ಶಿಕ್ಷಣ ದೊರೆತಾಗ ಮಾತ್ರ ಜನಸಂಖ್ಯೆ ಹೆಚ್ಚಳದ ದುಶ್ಪರಿಣಾಮಗಳ ಕುರಿತು ಅರಿವು ಮೂಡಲು ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಳದಿಂದ ದೇಶದ ಸಾಮಾಜಿಕ, ಆರ್ಥಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆಗಳು, ಬಾಲ್ಯ ವಿವಾಹ ಹಾಗೂ ಕಡಿಮೆ ಸಾಕ್ಷರತೆಯಿಂದಾಗಿ ಜನಸಂಖ್ಯೆ ಹೆಚ್ಚುತ್ತಿದ್ದು ಜನತೆ ತಮ್ಮ ವೈಯಕ್ತಿಕವಾದ ಹಾಗೂ ದೇಶದ ಅಭಿವೃದ್ಧಿಗಾಗಿ ಜನಸಂಖ್ಯೆ ಸ್ಫೋಟದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಸಮಾಜದಲ್ಲಿ ಹದಿಹರೆಯದ ಗರ್ಭದಾರಣೆ ವಿಷಯದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿದಾಗ ಜನಸಂಖ್ಯೆ ಸ್ಫೋಟವನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಪುರುಷ ಮತ್ತು ಮಹಿಳೆಯ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಪ್ರಕೃತಿದತ್ತವಾದ ಪೌಷ್ಟಿಕಾಂಶಗಳು ತಾಯಿ ಮತ್ತು ಮಕ್ಕಳಿಗೆ ಇಂದು ಬೇರೆ ಬೇರೆ ಕಾರಣಗಳಿಂದ ಸಿಗದೆ ಇರುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣುವಂತಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಜನಸಂಖ್ಯೆ ಸ್ಪೇಟದಿಂದ ರೋಗಗಳು ಉಲ್ಬಣಗೊಳ್ಳುವ ಜೊತೆಗೆ ಪ್ರಗತಿಗೆ ಮಾರಕವಾಗಲಿದೆ. ಜನಸಂಖ್ಯೆ ಸ್ಪೋಟಕ್ಕೆ ಬಾಲ್ಯವಿವಾಹ-, ಮೂಢನಂಬಿಕೆ ಪ್ರಮುಖ ಕಾರಣವಾಗಿದ್ದು ಸಾಮಾಜಿಕ ಪಿಡುಗು ನಿವಾರಣೆಗೆ ಸಮಾಜ ಧೃಡಸಂಕಲ್ಪ ಮಾಡಬೇಕಾಗಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿ ಜನಸಂಖ್ಯೆ ನಿಯಂತ್ರಣ ಮಾಡಲು ಪ್ರೇರಿಪಿಸಬೇಕಾಗಿದೆ ಎಂದರು.
ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮಹಿಳೆಯರು ಆಸಕ್ತಿ ತೋರಿಸುತ್ತಾರೆ. ಆದರೆ ಪುರುಷರು ಮಾತ್ರ ಜನಸಂಖ್ಯೆ ನಿಯಂತ್ರಣಕ್ಕೆ ಮಾತ್ರ ಸಹಕಾರ ನೀಡುತ್ತಿಲ್ಲವೆಂಬ ಅಂಶ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ಧೃಡವಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಬೇಕಿದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ, ಆರೋಗ್ಯ ಇಲಾಖೆಯ ಸಲಹಾ ಸಮಿತಿ ಸದಸ್ಯ ಶ್ರೀನಿವಾಸ್, ಸುನಂದಮ್ಮ, ಜಬೀವುಲ್ಲಾ, ದಾದಾಪೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.